ರಾಣೆಬೆನ್ನೂರ: ಅನುಮಾನಸ್ಪದವಾಗಿ ನಾಲ್ಕು ಎತ್ತುಗಳು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅಂಕಸಾಪುರ ಗ್ರಾಮದಲ್ಲಿ ನಡೆದಿದೆ.
ಅನುಮಾನಾಸ್ಪದವಾಗಿ ನಾಲ್ಕು ಎತ್ತುಗಳು ಸಾವು ಅಂಕಸಾಪುರ ಗ್ರಾಮದ ರಾಮಪ್ಪ ಅಡವಿ ಎಂಬ ರೈತನ ಸುಮಾರು 3 ಲಕ್ಷ ರೂ. ಬೆಲೆಬಾಳುವ ನಾಲ್ಕು ಎತ್ತುಗಳು ಸಾವನ್ನಪ್ಪಿದ್ದು, ರೈತನ ಕುಟುಂಬ ಸದಸ್ಯರ ಆಕ್ರಂದನ ಮುಗಿಲ ಮುಟ್ಟಿದೆ.
ರಾತ್ರಿ ಎಂದಿನಂತೆ ಮನೆಯ ಪಕ್ಕದಲ್ಲಿ ಎತ್ತುಗಳನ್ನು ಕಟ್ಟಿ ಹಾಕಿ ಮೇವು ಹಾಕಲಾಗಿತ್ತು. ಆದರೆ ಬೆಳಗ್ಗೆ ಎದ್ದು ರೈತ ನೋಡಿದಾಗ ನಾಲ್ಕೂ ಎತ್ತುಗಳು ಸಾವನ್ನಪ್ಪಿವೆ. ತಕ್ಷಣ ಪಶು ಆಸ್ಪತ್ರೆ ವೈದ್ಯರನ್ನು ಕರೆದುಕೊಂಡು ಬಂದು ತೋರಿಸಿದ್ದಾರೆ. ಆಗ ಎತ್ತುಗಳು ಮೃತಪಟ್ಟಿರುವುದು ದೃಢಪಟ್ಟಿದೆ.
ಎತ್ತುಗಳ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ ಭೇಟಿ ನೀಡಿ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.