ಹಾವೇರಿ:ಜಿಲ್ಲೆಯಲ್ಲಿ ಸಂಕ್ರಾಂತಿ ದಿನವೇ ಘೋರ ಘಟನೆ ನಡೆದಿದೆ. ರಟ್ಟಿಹಳ್ಳಿ ತಾಲೂಕಿನ ಕಡೂರು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲೇ ಇಬ್ಬರು ಅಸುನೀಗಿದ್ದು, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಸಾವನ್ನಪ್ಪಿದವರೆಲ್ಲ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮತ್ತಿಕೋಟಿ ಗ್ರಾಮದವರು ಎಂದು ತಿಳಿದುಬಂದಿದೆ. ಶಂಕರಗೌಡ (35), ಶಾಂತಮ್ಮ (32) ಹಾಗೂ ಬಾಲಕರಾದ ಪುನೀತ್ (12) ಮತ್ತು ರಘು (14) ಮೃತಪಟ್ಟವರು. ಘಟನೆಯಲ್ಲಿ ಇತರ ಆರು ಜನರು ಗಂಭೀರ ಗಾಯಗೊಂಡಿದ್ದು, ರಟ್ಟಿಹಳ್ಳಿ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸಂಕ್ರಾಂತಿ ದಿನವೇ ಭೀಕರ ಅಪಘಾತ ಎರಡು ಕಾರು ಮತ್ತು ಮೆಕ್ಕೆಜೋಳ ತುಂಬಿದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಒಂದರ ಹಿಂದೊಂದು ಚಲಿಸುತ್ತಿದ್ದ ಕಾರುಗಳಿಗೆ ನಿಯಂತ್ರಣ ತಪ್ಪಿದ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಎರಡು ಕಾರುಗಳಲ್ಲಿಯೂ ಒಂದೇ ಕುಟುಂಬದವರಾಗಿದ್ದ ಸೋದರ ಸಂಬಂಧಿಗಳಿದ್ದರು. ಇವರೆಲ್ಲ ಸಂಕ್ರಾಂತಿ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಕರಿಬಸಜ್ಜನ ದೇವಸ್ಥಾನಕ್ಕೆ ಭೇಟಿ ನೀಡಿ ಮರಳಿ ಗ್ರಾಮಕ್ಕೆ ವಾಪಸಾಗುತ್ತಿದ್ದರು.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರಟ್ಟಿಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕೊಡಗು : ಬೈಕ್ ಮೇಲೆ ಕಾಡಾನೆ ದಾಳಿ.. ಕ್ರಿಕೆಟ್ ಆಡಿ ಮನೆಗೆ ಬರುತ್ತಿದ್ದ ಯುವಕ ಬಾರದ ಲೋಕಕ್ಕೆ