ಹಾವೇರಿ/ಬೆಂಗಳೂರು :ಸಚಿವ ಬಿ ಸಿ ಪಾಟೀಲ್ರಿಂದ ನನಗೆ ಕಿರುಕುಳ ಇತ್ತು. ಹಾಗಾಗಿ ನಾನು ಪಕ್ಷ ಬಿಡುವ ನಿರ್ಧಾರ ಮಾಡಿದ್ದೇನೆ ಎಂದು ಮಾಜಿ ಶಾಸಕ ಯು ಬಿ ಬಣಕಾರ್ ಅವರು ಬಿಜೆಪಿಗೆ ಗುಡ್ ಬೈ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಸದಸ್ಯತ್ವ, ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನಕ್ಕೆ ಸಹ ಬಣಕಾರ ರಾಜೀನಾಮೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆಪ್ತರಾಗಿದ್ದ ಯು. ಬಿ ಬಣಕಾರ ಎರಡು ಬಾರಿ ಶಾಸಕರಾಗಿದ್ದರು. ಹಿರೇಕೆರೂರು ಕ್ಷೇತ್ರದಿಂದ 1994ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಬಣಕಾರ ಗೆಲುವು ಸಾಧಿಸಿದ್ದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಜಯ ಸಾಧಿಸಿದ್ದ ಬಣಕಾರ್ ನಂತರ ಹಿರೇಕೆರೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿ. ಸಿ ಪಾಟೀಲ್ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು.
ಸದ್ಯ ಬೆಂಗಳೂರಿನ ನಿವಾಸದಲ್ಲಿರೋ ಬಣಕಾರ್ ನಾಳೆ ಉಗ್ರಾಣ ನಿಗಮದ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 11ರಂದು ಹಿರೇಕೆರೂರಿಗೆ ಆಗಮಿಸಿ ಅಭಿಮಾನಿಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಚುನಾವಣೆಗೆ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎನ್ನುವ ಕುರಿತಂತೆ ತಮ್ಮ ಅಭಿಮಾನಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಬಣಕಾರ್ ತಿಳಿಸಿದ್ದಾರೆ.
ಪಕ್ಷ ಬಿಡುವ ನಿರ್ಧಾರ ಮಾಡಿದ್ದೇನೆ:ಈ ಕುರಿತು ಮಾಹಿತಿ ನೀಡಿದ ಮಾಜಿ ಶಾಸಕ ಯು ಬಿ ಬಣಕಾರ್, ಹಿರೇಕೆರೂರು ಕ್ಷೇತ್ರದಲ್ಲಿ ನಾವು ಇಬ್ಬರು ನಾಯಕರು ಇದ್ದೆವು. ಇಬ್ಬರೂ ಒಟ್ಟಿಗೆ ಹೋಗಲು ಆಗಲಿಲ್ಲ. ಬಿಜೆಪಿ ಹಿರಿಯ ನಾಯಕ ಬಿ. ಎಸ್ ಯಡಿಯೂರಪ್ಪ ಅವರು ನಮ್ಮಿಬ್ಬರನ್ನೂ ಪಕ್ಷದ ಎರಡು ಕಣ್ಣುಗಳು ಅಂದರು. ಆದರೆ ನಾವಿಬ್ಬರೂ ಒಟ್ಟಿಗೆ ಹೋಗಲು ಆಗಿಲ್ಲ. ಸಚಿವ ಬಿ ಸಿ ಪಾಟೀಲ್ರಿಂದ ನನಗೆ ಕಿರುಕುಳ ಇತ್ತು. ಹಾಗಾಗಿ ನಾನು ಪಕ್ಷ ಬಿಡುವ ನಿರ್ಧಾರ ಮಾಡಿದ್ದೇನೆ ಎಂದರು.
ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ: ಯಡಿಯೂರಪ್ಪ ಮೇಲೆ ಬೇಸರ ಇಲ್ಲ, ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕಿತ್ತು. ಅದಕ್ಕೆ ನಾನು ಅಂದು ಏನೂ ಹೇಳಲಿಲ್ಲ. ಕಾರ್ಯಕರ್ತರ ಜತೆ ಚರ್ಚಿಸಿಯೇ ಈ ನಿರ್ಧಾರ ತಗೊಂಡಿದ್ದೇನೆ. ನನ್ನ ಜಾಗದಲ್ಲಿ ಬೇರೆಯವರು ಇದ್ದಿದ್ದರೆ ನಾಲ್ಕೈದು ತಿಂಗಳ ಹಿಂದೆಯೇ ಪಕ್ಷ ಬಿಡುತ್ತಿದ್ದರು. ಆದರೆ ನಾನು ಸಾಕಷ್ಟು ಸಮಯ ಪಡೆದೇ ಈ ನಿರ್ಧಾರಕ್ಕೆ ಬಂದಿದ್ದೇನೆ. ನವೆಂಬರ್ 11 ರಂದು ಕಾರ್ಯಕರ್ತರ ಸಮ್ಮುಖದಲ್ಲಿ ಚರ್ಚಿಸಿ ನನ್ನ ಮುಂದಿನ ನಡೆ ಬಗ್ಗೆ ನಿರ್ಧಾರ ಮಾಡುತ್ತೇನೆ. ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ, ಯಾರೇ ಮನವೊಲಿಸಿದರೂ ನಾನು ಬಿಜೆಪಿ ತೊರೆಯುವ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದರು.