ಹಾವೇರಿ: ಕಾಂಗ್ರೆಸ್ ಹೇಳುವುದು ಜಾತ್ಯತೀತವಾದ. ಮಾಡುವುದು ಹಿಂದೂ ವಿರೋಧಿ ನೀತಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಲವಂತದ ಮತಾಂತರ ನಿಷೇಧ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯನ್ನು ನಾವು ತಂದಿದ್ದೆವು. ಕಾಂಗ್ರೆಸ್ ಸರ್ಕಾರ ಇದೀಗ ಅವುಗಳನ್ನು ವಾಪಸ್ ಪಡೆಯಲು ಮುಂದಾಗಿದೆ. ಈ ಮೂಲಕ ಮುಸ್ಲಿಮರನ್ನು ಸಂತೃಪ್ತಿಗೊಳಿಸಲು ಸಜ್ಜಾಗಿದೆ ಎಂದು ಈಶ್ವರಪ್ಪ ಆರೋಪಿಸಿದರು.
ಕಾಂಗ್ರೆಸ್ ಆರ್ಟಿಕಲ್ 370 ಜಾರಿ ಆಗಬಾರದು ಅಂದುಕೊಂಡಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬಾರದು ಎಂದಿತ್ತು. ಆದರೆ ಇವುಗಳಲ್ಲಿ ಕಾಂಗ್ರೆಸ್‌ಗೆ ನಿರಾಸೆಯಾಗಿದೆ. ದೇಶದಲ್ಲಿ ಮೊಗಲರ ಕಾಲದಲ್ಲಿ ಯಾವ ಯಾವ ದೇವಸ್ಥಾನಗಳನ್ನು ಧ್ವಂಸ ಮಾಡಿ ಮಸೀದಿ ಕಟ್ಟಿದ್ದಾರೋ ಅಲ್ಲೆಲ್ಲ ಮತ್ತೆ ದೇವಸ್ಥಾನ ಕಟ್ಟುತ್ತೇವೆ. ಕಾಶಿ ವಿಶ್ವನಾಥ್ ದೇವಸ್ಥಾನ, ಮಥುರಾದಲ್ಲಿ ಶ್ರೀಕೃಷ್ಣನ ದೇವಾಲಯ ನಿರ್ಮಿಸುತ್ತೇವೆ. ಆದರೆ ಹೊಸದಾಗಿ ಕಟ್ಟಿಸಿದ ಮಸೀದಿಗಳನ್ನು ತೆರವುಗೊಳಿಸುವುದಿಲ್ಲ ಎಂದು ಹೇಳಿದರು.
ಮೋಸದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಜನರು ಪರಿತಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎಷ್ಟು ದಿನ ಇರುತ್ತದೆ ಗೊತ್ತಿಲ್ಲ. ಈ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಎಲ್ಲಿಂದ ಹಣ ತರುತ್ತಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದರು. ನಮಗೆ ಚುನಾವಣೆಯಲ್ಲಿ ಸೋಲಾಗಿದೆ. ಆದರೆ ಜನರೆ ಇದೀಗ ಕಾಂಗ್ರೆಸ್ ನಮಗೆ ಮೋಸ ಮಾಡಿದೆ ಎಂದು ಹೇಳುತ್ತಿದ್ದಾರೆ. ಚುನಾವಣೆಯ ಸೋಲುಗಳು ಬಿಜೆಪಿಗೆ ಹೊಸದಲ್ಲ. ಮುಂಬರುವ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ವಿಧಾನಸಭೆಯಲ್ಲಿ ಸೋತಿರುವುದು ಕೆಟ್ಟ ಕನಸು ಎಂದು ಮರೆತಿದ್ದೇವೆ. ಅದನ್ನು ಪುನಃ ಪುನಃ ನೆನಪು ಮಾಡಬೇಡಿ ಎಂದು ಈಶ್ವರಪ್ಪ ತಿಳಿಸಿದರು.
ಕಾಂಗ್ರೆಸ್ ಸ್ವಾರ್ಥಿಗಳ ಕೂಟ. ಆದರೆ ಬಿಜೆಪಿ ಆ ರೀತಿಯ ಪಕ್ಷವಲ್ಲ. ಕಾಂಗ್ರೆಸ್ ನೇರವಾಗಿ ಮತದಾರನ ಬಳಿ ಕ್ಷಮೆ ಕೇಳಬೇಕು. ಕಾಂಗ್ರೆಸ್ ಜನರಿಗೆ ಟೋಪಿ ಹಾಕಿದ್ದೇವೆ ಎಂದು ಒಪ್ಪಿಕೊಳ್ಳಲಿ. ಕೇಂದ್ರ ಸರ್ಕಾರವು ರಾಜ್ಯಕ್ಕೆ ಐದು ಕೆಜಿ ಅಕ್ಕಿ ವಿತರಿಸುತ್ತಿದೆ. ಕಾಂಗ್ರೆಸ್ ಯಾವಾಗಲಾದರೂ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದೆಯಾ ಎಂದು ಈಶ್ವರಪ್ಪ ಪ್ರಶ್ನಿಸಿದರು. ತಾವು ಮೋಸ ಮಾಡಿದ ಮೇಲೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಟೀಕಿಸಿದರು.