ಹಾವೇರಿ : ಜನರು ಬಿಜೆಪಿಯ ಅಭಿವೃದ್ಧಿಗೆ ಮತ ನೀಡುತ್ತಾರೆ ಎಂದುಕೊಂಡಿದ್ದೆವು. ಬಿಜೆಪಿಯ ಹಲವು ನಿರ್ಧಾರಗಳು ಪಕ್ಷದ ಸೋಲಿಗೆ ಕಾರಣವಾಗಿದೆ. ಪ್ರಮುಖವಾಗಿ ಒಳಮೀಸಲಾತಿ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಹಿರೇಕೆರೂರಿನ ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಸೋಲನ್ನು ನಿರೀಕ್ಷಿಸಿರಲಿಲ್ಲ. ಒಳ ಮೀಸಲಾತಿಯಿಂದಾಗಿ ಹಲವು ಲಂಬಾಣಿ ತಾಂಡಾಗಳಿಂದ ಮತಗಳು ನಮಗೆ ಬಂದಿಲ್ಲ. ಸುಮಾರು 90 ಶೇಕಡಾ ಮತಗಳು ಬೇರೆ ಪಕ್ಷಕ್ಕೆ ಹೋಗಿದೆ. ಜೊತೆಗೆ ಜನರು ಕಾಂಗ್ರೆಸ್ನ ಗ್ಯಾರಂಟಿಗಳನ್ನು ನಂಬಿದ್ದಾರೆ. ಚುನಾವಣಾ ಫಲಿತಾಂಶ ಮತ್ತು ಜನರ ತೀರ್ಪಿಗೆ ತಲೆಬಾಗುತ್ತೇನೆ ಎಂದು ಹೇಳಿದರು.
ಇನ್ನು ಜನರು ನನ್ನನ್ನು ನಾಲ್ಕು ಬಾರಿ ಆಯ್ಕೆ ಮಾಡಿದ್ದರು. ಇಂದು ನಾನು ಸೋತಿದ್ದರೂ ತಾಲೂಕಿನ ಜನರ ಋಣವನ್ನು ತೀರಿಸಿದ್ದೇನೆ ಎಂಬ ತೃಪ್ತಿ ನನಗಿದೆ. ತಾಲೂಕಿನಲ್ಲಿ ಎಲ್ಲಾ ಕೆರೆಗಳನ್ನು ತುಂಬಿಸುವ ಕಾರ್ಯಗಳನ್ನು ಮಾಡಿದ್ದೇವೆ. ಕುಡಿಯುವ ನೀರಿನ ವ್ಯವಸ್ಥೆಗಳನ್ನು ಮಾಡಿದ್ದೇವೆ. ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತಾಲೂಕಿಗೆ ಹೊಸ ರೂಪವನ್ನು ನೀಡಿದ್ದೇನೆ. ಈ ಬಾರಿ ಸೋತಿದ್ದರೂ ಸುಮಾರು 69 ಸಾವಿರ ಜನ ನನ್ನೊಂದಿಗೆ ನಿಂತಿದ್ದಾರೆ. ನಾವೇನು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಅದನ್ನು ಮುಂದಿನ ಶಾಸಕರು ಮುಂದುವರೆಸಿಕೊಂಡು ಹೋಗಲಿ ಎಂಬುದು ನಮ್ಮ ಇಚ್ಛೆ. ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಎಲ್ಲಾ ಅಭಿವೃದ್ಧಿ ಕೆಲಸವನ್ನು ಮುಂದುವರೆಸಿಕೊಂಡು ಹೋಗಲಿದೆ ಎಂದು ವಿಶ್ವಾಸವಿದೆ ಎಂದು ಹೇಳಿದರು.