ಹಾವೇರಿ: ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿ ಮನೋಹರ ತಹಶೀಲ್ದಾರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಹಾನಗಲ್‌ನಲ್ಲಿ ಶುಕ್ರವಾರ ನಡೆದ ಸ್ವಾಭಿಮಾನಿ ಸಭೆಯಲ್ಲಿ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಕೈ ತೊರೆದು ತೆನೆಹೊತ್ತ ಮಹಿಳೆಯತ್ತ ಮುಖ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ನಿಂದ ನನಗೆ ದ್ರೋಹ ಆಗಿದ್ದಕ್ಕೆ ಪಕ್ಷ ತೊರೆಯುವ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.
ಇನ್ನೆಂದೂ ಕಾಂಗ್ರೆಸ್ ಕಡೆ ತಲೆ ಹಾಕುವುದಿಲ್ಲ- ತಹಶೀಲ್ದಾರ್.. ಕಾಂಗ್ರೆಸ್ ಹೈಕಮಾಂಡ್ ನನಗೆ ಮಾಡಿದ ದ್ರೋಹವನ್ನು ಪ್ರತಿಭಟಿಸಿ ಪಕ್ಷ ತೊರೆಯುವ ನಿರ್ಧಾರ ಕೈಗೊಂಡಿದ್ದೇನೆ. ಇನ್ನೆಂದೂ ಕಾಂಗ್ರೆಸ್ ಕಡೆ ತಲೆ ಹಾಕುವುದಿಲ್ಲ ಎಂದು ಅವರು ಹೇಳಿದರು. ಕಾಂಗ್ರೆಸ್ ತೊರೆದು ರೈತರ, ಜನಪರವಾದ ಜಾತ್ಯಾತೀತ ಜನತಾದಳ ಪಕ್ಷ ಸೇರಲು ತೀರ್ಮಾನಿಸಿರುವುದಾಗಿ ಮಾಜಿ ಸಚಿವರು ಸ್ಪಷ್ಟಪಡಿಸಿದ್ದಾರೆ. ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷ ನನಗೆ ತಾಯಿಯಾಗಿತ್ತು, ಪಕ್ಷವನ್ನ ತಾಯಿಯಂತೆ ನೋಡಿಕೊಂಡ ನನಗೆ ತಾಯಿಯ ಹಾಲು ವಿಷವಾಗಿ ಪರಿಣಮಿಸಿದೆ. ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದೇನೆ ಎಂದು ತಿಳಿಸಿದರು.
20 ವರ್ಷ ಶಾಸಕರಾಗಿ ಸೇವೆ: 1978ರಲ್ಲಿ ಮೊದಲ ಬಾರಿ ಶಾಸಕನಾಗಿದ್ದೆ, ನಂತರ 1989, 1999 ಹಾಗೂ 2013ರಲ್ಲಿ ಒಟ್ಟು 20 ವರ್ಷ ಶಾಸಕನಾಗಿ, ವಿಧಾನಸಭೆ ಉಪಸಭಾಪತಿಯಾಗಿ, ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಹಿರಿತನವನ್ನು ಕಡೆಗಣಿಸಿ 2018ರಲ್ಲಿ ಶಾಸಕನಾಗಿದ್ದರೂ ಸಹ ಕಾಂಗ್ರೆಸ್ ಹೈಕಮಾಂಡ್ ಹೊರಗಿನವರಿಗೆ ಟಿಕೆಟ್ ನೀಡಿತ್ತು. ನಂತರ ನಡೆದ ಉಪಚುನಾವಣೆಯಲ್ಲಿ ಸಹ ನನ್ನ ಮನವೊಲಿಸಿ ಶ್ರೀನಿವಾಸ ಮಾನೆಗೆ ಟಿಕೆಟ್ ನೀಡಿದ್ದರು. ಆದರೂ ಸಹ ನನ್ನೆಲ್ಲ ನೋವು ಮರೆತು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ನಾನು ಶ್ರಮಿಸಿದ್ದೆ ಎಂದರು.
ಸೌಜನ್ಯಕ್ಕೂ ಸಹ ಕಾಂಗ್ರೆಸ್ ಮುಖಂಡರು ನನ್ನನ್ನು ಸಂಪರ್ಕಿಸಿಲ್ಲ- ತಹಶೀಲ್ದಾರ್.. ಈ ಬಾರಿಯಾದರೂ ನನಗೆ ಅವಕಾಶ ನೀಡುವಂತೆ ದೆಹಲಿವರೆಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭೇಟಿಯಾಗಿ ಮನವಿ ಮಾಡಿದ್ದೆ. ಕೆಪಿಸಿಸಿ ಮುಖಂಡರಿಗೂ ಭೇಟಿಯಾಗಿ ಟಿಕೆಟ್ ನೀಡುವ ಕುರಿತು ಮಾತನಾಡಿದ್ದೆ. ಆದರೆ 2018 ರಿಂದ ನನ್ನನ್ನು ಕಣದಿಂದ ಹಿಂದೆ ಸರಿಸುವ ಪ್ರಯತ್ನ ನಡೆದಿದೆ. ಹಾನಗಲ್ ಅಭ್ಯರ್ಥಿ ಎಂದು ಶ್ರೀನಿವಾಸ ಮಾನೆ ಘೋಷಣೆಯ ನಂತರ ಸೌಜನ್ಯಕ್ಕೂ ಸಹ ಕಾಂಗ್ರೆಸ್ ಮುಖಂಡರು ನನ್ನ ಸಂಪರ್ಕ ಮಾಡಿಲ್ಲಾ ಎಂದು ಹೇಳಿದರು.