ಹಾವೇರಿ :ಪ್ರತಿದಿನ ಸರ್ಕಾರದ ಸಚಿವರು ಒಂದಿಲ್ಲೊಂದು ಗೊಂದಲದ ಹೇಳಿಕೆ ಕೊಡುವುದನ್ನು ನೋಡಿದರೆ ಒಳಗಡೆ ಯಾವುದೂ ಸರಿ ಇಲ್ಲ ಎನಿಸುತ್ತಿದೆ. ನಾಲ್ಕು ತಿಂಗಳಲ್ಲಿ ಜನಸಾಮಾನ್ಯರ ಪ್ರೀತಿಯನ್ನೂ ಕಳೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಹುರಳಿಕೊಪ್ಪಿ ಗ್ರಾಮದಲ್ಲಿಂದು, ಸಚಿವ ಕೆ.ಹೆಚ್.ಮುನಿಯಪ್ಪನವರ ದಲಿತ ಸಿಎಂ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಗೊಂದಲದ ಗೂಡಾಗಿದ್ದು, ಒಬ್ಬರಿಗೊಬ್ಬರ ಸಹಕಾರವಿಲ್ಲ. ಕ್ಯಾಬಿನೆಟ್ನಲ್ಲಿ ಒಗ್ಗಟ್ಟಿಲ್ಲ. ಶಾಸಕರಲ್ಲಿ ಆಕ್ರೋಶವಿದೆ. ಸಂಪೂರ್ಣವಾಗಿ ನಾಲ್ಕು ತಿಂಗಳಲ್ಲಿ ಜನರ ಪ್ರೀತಿಯನ್ನು ಸರ್ಕಾರ ಕಳೆದುಕೊಂಡಿದೆ. ಹೀಗಾಗಿ ಜನರಿಗೆ ಈ ಸರ್ಕಾರದ ಇದೆ ಎಂಬ ಭಾವನೆ ಇಲ್ಲ. ಬರ ಬಂದು ರೈತರು ಆತ್ಯಹತ್ಯೆ ಮಾಡಿಕೊಂಡರೂ ಸರ್ಕಾರ ನೆರವಾಗುತ್ತಿಲ್ಲ. ಯಾವುದೇ ಅಭಿವೃದ್ದಿ ಕೆಲಸಗಳೂ ನಡೆಯುತ್ತಿಲ್ಲ. ಈ ರೀತಿಯ ಗೊಂದಲದ ಹೇಳಿಕೆಗಳಿಂದ ಮುಖ್ಯಮತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಸಚಿವ ಸಂಪುಟ ಸದಸ್ಯರ ಮೇಲೆ ಯಾವುದೇ ನಿಯಂತ್ರಣವಿಲ್ಲ ಎಂಬುದು ಸ್ಪಷ್ಟ ಎಂದರು.
ಕಾವೇರಿ ವಿಚಾರಕ್ಕೆ ಸಿದ್ದರಾಮಯ್ಯನವರು ಶನಿವಾರ ನ್ಯಾಯಮೂರ್ತಿಗಳೊಂದಿಗೆ ನಡೆಸಿದ ಸಭೆಯಲ್ಲಿ ನಾವು ಅಪೀಲ್ ಹೋಗುತ್ತೇವೆ, ನೀರು ನಿಲ್ಲಿಸುತ್ತೇವೆ ಎಂದು ಹೇಳುತ್ತಾರೆ. ಇದೇ ವೇಳೆ ಹೊರಗಡೆ ಬಂದು ಅಪೀಲ್ ಹೋಗುತ್ತೇವೆ, ಆದ್ರೆ ನೀರು ನಿಲ್ಲಿಸೋಕೆ ಆಗಲ್ಲ ಅಂತಾರೆ. ಯಾಕೆ ನೀರು ನಿಲ್ಲಿಸೋಕೆ ಆಗಲ್ಲ ಎಂದು ಬೊಮ್ಮಾಯಿ ಪ್ರಶ್ನಿಸಿದರು.