ಹಾವೇರಿ:ಪಟಾಕಿಯಂತಹ ಸ್ಫೋಟಕ ವಸ್ತುಗಳ ಅವಘಡಗಳಲ್ಲಿ ಗಾಯಾಳುಗಳಿಗಿಂತ ಸಾವನ್ನಪ್ಪುವವರ ಸಂಖ್ಯೆ ಅಧಿಕವಾಗಿರುತ್ತದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮದಲ್ಲಿ ಪಟಾಕಿ ದುರಂತ ನಡೆದ ಗೋದಾಮಿಗೆ ಭೇಟಿ ನೀಡಿ ಘಟನೆಯಲ್ಲಿ ಸಾವನ್ನಪ್ಪಿದ ಕಾಟೇನಹಳ್ಳಿ ಗ್ರಾಮದ ಮೂವರು ಯುವಕರ ಕುಟುಂಬದ ಸದಸ್ಯರಿಗೆ ಬಿಜೆಪಿಯಿಂದ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದರು.
ಬಳಿಕ ಮಾತನಾಡಿದ ಅವರು, ಈ ರೀತಿ ಘಟನೆಗಳು ಆಗದಂತೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು. ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಸಿಗಬೇಕು ಮತ್ತು ಸಾವನ್ನಪ್ಪಿದವರ ಕುಟುಂಬಗಳಿಗೆ ಸರಿಯಾದ ಪರಿಹಾರ ಸಿಗಬೇಕು. ರಾಣೆಬೆನ್ನೂರು ಸೇರಿದಂತೆ ಆಲದಕಟ್ಟಿಯಲ್ಲಾದ ಪಟಾಕಿ ಅವಘಡಗಳಿಗೆ ಜಿಲ್ಲಾಡಳಿತದ ದುರ್ಲಕ್ಷ್ಯ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಗೋದಾಮಿನಲ್ಲಿ ಭಾರೀ ಪ್ರಮಾಣದಲ್ಲಿ ಪಟಾಕಿಯನ್ನು ನಿರ್ಭಿತಿಯಿಂದ ಲೈಸೆನ್ಸ್ ಇಲ್ಲದೆ ದಾಸ್ತಾನು ಮಾಡಿದ್ದಾರೆ ಅಂದರೆ ಹೇಗೆ. ರಾಣೆಬೆನ್ನೂರು ಪ್ರಕರಣದಲ್ಲಿ ಸಾವನ್ನಪ್ಪಿದವರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಇನ್ನು ಹಾವೇರಿ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತೀರುವುದಕ್ಕೆ ಮಾಜಿ ಸಿಎಂ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿ, ಈ ಕುರಿತಂತೆ ವಿಧಾನಸಭೆ ಅಧಿವೇಶನದಲ್ಲಿ ನಾನು ಹೇಳಿದಾಗ ಕೃಷಿ ಸಚಿವರು ಒಪ್ಪಲಿಲ್ಲ. ಈ ಕುರಿತಂತೆ ದಾಖಲಾತಿಗಳಿವೆ ಎಂದರೂ ಸಹ ಒಪ್ಪಲಿಲ್ಲ. ಈ ಕುರಿತಂತೆ ಸಚಿವ ಶಿವಾನಂದ ಪಾಟೀಲ್ ಬೇಜಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಸರ್ಕಾರ ರೈತ ವಿರೋಧಿ ಮತ್ತು ರೈತರನ್ನ ನಿರ್ಲಕ್ಷ್ಯ ಮಾಡಿದೆ ಎಂದು ಕಿಡಿಕಾರಿದರು.