ಹಾವೇರಿ: ಜಾತಿಗಣತಿ ಬಹಿರಂಗಕ್ಕೆ ಬಿಜೆಪಿ ವಿರೋಧಪಡಿಸುವ ಕುರಿತಂತೆ ಎಲ್ಲಿಯೂ ಚರ್ಚೆಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಮಾತನಾಡಿದ ಅವರು, ಎಲ್ಲಿಯೂ ಜಾತಿ ಗಣತಿ ಆದೇಶ ಇಲ್ಲ. ಆದರೆ, ಇದೀಗ ಜಾತಿ ಗಣತಿ ಎಂದು ಬಿಂಬಿಸಲಾಗುತ್ತಿದೆ. ಈಗ ಆಗಿರುವ ಸಮೀಕ್ಷೆ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೋ ಅಥವಾ ಜಾತಿ ಗಣತಿ ಸಮೀಕ್ಷೆಯೋ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಎರಡಲ್ಲಿ ಯಾವುದೆಂದು ಅವರೇ ಹೇಳಲಿ. ಎಲ್ಲ ವಿಚಾರದಲ್ಲಿಯೂ ಮುಖ್ಯಮಂತ್ರಿ ಒಂದು ದಾರಿ ಹಿಡಿದರೆ, ಉಪಮುಖ್ಯಗಳದ್ದೇ ಮತ್ತೊಂದು ದಾರಿ ಇದೆ. ಕಾವೇರಿ ನೀರು ಬಿಡುವ ವಿಚಾರದಲ್ಲಿ ನೀರು ಬಿಡಲ್ಲವೆಂದು ಸಿದ್ದರಾಮಯ್ಯನವರು ಹೇಳಿದರೆ, ಅವರು ಹೇಳಿದ ಎರಡು ಗಂಟೆಯಲ್ಲಿ ನೀರು ಬಿಟ್ಟ ಉದಾಹರಣೆಯನ್ನು ನಾವು ನೋಡಿದ್ದೇವೆ. ಅದೇ ರೀತಿ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಲಾಗುತ್ತದೆ ಎಂದು ಸಿಎಂ ಹೇಳಿದರೆ, ಗ್ಯಾರಂಟಿಗಳಿಂದ ಹಣ ನೀಡಲಾಗಲ್ಲ ಎಂದು ಡಿಸಿಎಂ ಹೇಳುತ್ತಾರೆ. ಒಬ್ಬರದ್ದು ಒಂದು ದಾರಿಯಾದರೆ, ಅದಕ್ಕೆ ತದ್ವಿರುದ್ಧವಾಗಿ ಮತ್ತೊಬ್ಬರದ್ದು ಮತ್ತೊಂದು ದಾರಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ವಾಗ್ದಾಳಿ ನಡೆಸಿದರು.
ಬಾರ್ ಲೈಸನ್ಸ್ ವಿಚಾರದಲ್ಲಿ ಸಿಎಂ, ಡಿಸಿಎಂ ದ್ವಂದ್ವ ಹೇಳಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಆಯಕಟ್ಟಿನ ಸ್ಥಳಗಳಲ್ಲಿ ಕೊಡಲಾಗುತ್ತದೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಇದಾರೋ ಅಥವಾ ಸೂಪರ್ ಸಿಎಂ ಇದಾರೋ ಅನ್ನೋದೇ ಗೊತ್ತಾಗುತ್ತಿಲ್ಲ. ಇವರ ದ್ವಂದ್ವದ ನಿಲುವು ಮತ್ತು ಹೇಳಿಕೆಗಳು ರಾಜ್ಯದ ಜನರ ಮೇಲೆ ಪರಿಣಾಮ ಬೀರುತ್ತಿವೆ. ಒಂದು ನೀತಿ ಮಾಡಿದಾಗ ಸರ್ಕಾರ ಅದಕ್ಕೆ ಸ್ಪಷ್ಟನೆ ಕೊಡಬೇಕು ಎಂದು ಅವರು ಒತ್ತಾಯ ಮಾಡಿದರು.