ಹಾವೇರಿ:ಗೃಹ ಪ್ರವೇಶದ ಊಟ ಸೇವಿಸಿ 30ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಹಾರ ಸೇವಿಸಿದ್ದ ವಿದ್ಯಾರ್ಥಿಗಳು ಸೇರಿದಂತೆ 30ಕ್ಕೂ ಅಧಿಕ ಜನ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಶೇಖರಪ್ಪ ಎಂಬುವವರ ಗೃಹ ಪ್ರವೇಶ ಊಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶುಕ್ರವಾರ ನಡೆದ ಗೃಹ ಪ್ರವೇಶದಲ್ಲಿ ಊಟ ಸೇವಿಸಿದ ಕೆಲವರಿಗೆ ವಾಂತಿ, ಬೇದಿ ಆಗಿದೆ.
ಅಸ್ವಸ್ಥಗೊಂಡವರನ್ನು ರಾಣೆಬೆನ್ನೂರು ತಾಲೂಕಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರ ಆರೋಗ್ಯ ಸ್ಥಿರವಾಗಿದ್ದು, ಚೇತರಿಕೆ ಕಾಣುತ್ತಿದೆ. ಈ ಕುರಿತಂತೆ ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
"ಗೃಹ ಪ್ರವೇಶ ಕಾರ್ಯಕ್ರಮಕ್ಕೆ 200 ರಿಂದ 250 ಜನ ಸೇರಿದ್ದರು, ನಿನ್ನೆ ರಾತ್ರಿಯ ಊಟದ ನಂತರ ಬಹುತೇಕರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ವಾಂತಿ, ಬೇದಿಯ ಜೊತೆಗೆ ಚಳಿ ಜ್ವರವೂ ಕಾಣಿಸಿಕೊಂಡಿದ್ದರಿಂದ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ" ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಹಾಸ್ಟೆಲ್ನಲ್ಲಿ ಬೆಳಗಿನ ಉಪಹಾರ ಸೇವಿಸಿ 20 ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಪ್ರತ್ಯೇಕ ಪ್ರಕರಣ: ಕಲುಷಿತ ನೀರು ಸೇವಿಸಿ 19 ಜನ ಅಸ್ವಸ್ಥ:ಇತ್ತೀಚೆಗೆಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ 19 ಜನ ವಾಂತಿ, ಬೇದಿಯಿಂದ ಅಸ್ವಸ್ಥರಾಗಿದ್ದರು. ಕಲುಷಿತ ನೀರಿನಿಂದ ಗ್ರಾಮದ ಜನರಲ್ಲಿ ಈ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾತನಾಡಿದ್ದ ವೈದ್ಯರು ನೀರನ್ನು ಪರೀಕ್ಷೆಗೆ ಕಳುಹಿಸಿದ್ದು, ಬಳಸಲು ಯೋಗ್ಯವೇ ಎಂಬುದನ್ನು ಪರೀಕ್ಷಿಸಿ ಊರಿನ ಜನರಿಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದರು.
ಹಾಸ್ಟೆಲ್ನಲ್ಲಿ ಉಪಹಾರ ಸೇವಿಸಿ 20 ವಿದ್ಯಾರ್ಥಿಗಳು ಅಸ್ವಸ್ಥ:ಚಿಕ್ಕಬಳ್ಳಾಪುರದ ಅಂಬಾಜಿದುರ್ಗ ಹೋಬಳಿ ಕೋಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಕೆ.ರಾಗುಟ್ಟಹಳ್ಳಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಆಗಸ್ಟ್ 16 ರಂದು ನಡೆದಿದೆ. ಬೆಳಗ್ಗಿನ ಉಪಹಾರಕ್ಕೆ ಇಡ್ಲಿ ಸಾಂಬಾರ ಸೇವನೆ ಮಾಡಿದ ನಂತರ ಅನಾರೋಗ್ಯಕ್ಕೆ ವಿದ್ಯಾರ್ಥಿಗಳು ಒಳಗಾಗಿದ್ದರು.
ಉಪಹಾರ ಸೇವಿಸಿದ 10 ನಿಮಿಷದ ಬಳಿಕ ವಾಂತಿ ಬೇದಿ ಶುರುವಾಗಿದ್ದು, 20 ಕ್ಕೂ ಹೆಚ್ಚು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದರಿಂದ ಭಯಗೊಂಡ ಅಡುಗೆ ಸಿಬ್ಬಂದಿ ಶಿಕ್ಷಕರ ಗಮನಕ್ಕೆ ತಂದು ಕೂಡಲೇ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಘಟನೆಯ ವಿಷಯ ತಿಳಿದ ಕೂಡಲೆ ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ವಿದ್ಯಾರ್ಥಿಗಳು ತಿಂದಿದ್ದ ಇಡ್ಲಿ ಸಾಂಬಾರ ಅನ್ನು ಪರಿಶೀಲನೆ ನಡೆಸಲು ಲ್ಯಾಬ್ಗೆ ಕಳುಹಿಸಲಾಗಿತ್ತು. ಚಿಂತಾಮಣಿ ಉಪ ವಿಭಾಗದ ಎಎಸ್ಪಿ ಕುಶಲ್ ಚೌಕ್ಸೆ, ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗೂ ವಿದ್ಯಾರ್ಥಿಗಳೊಂದಿಗೆ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ಯಾದಗಿರಿ: ವಾಂತಿ, ಭೇದಿಯಿಂದ 19 ಜನ ಅಸ್ವಸ್ಥ