ಮಡಿಕೇರಿ(ಕೊಡಗು): ಕಳೆದೆರಡು ವರ್ಷಗಳಿಂದ ಕೊಡಗು ಜಿಲ್ಲೆ ನಿರಂತರವಾಗಿ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದೆ. ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ಇದೀಗ ಹಾರಂಗಿ ಜಲಾಶಯ ಮತ್ತು ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದ್ದು ಮತ್ತೆ ಪ್ರವಾಹ ಭೀತಿ ಎದುರಾಗಿದೆ.
2018ರಲ್ಲಿ ಭೂಕುಸಿತ ಮತ್ತು ಪ್ರವಾಹ ಎರಡೂ ಒಟ್ಟೊಟ್ಟಿಗೆ ಸಂಭವಿಸಿತ್ತು. ಈ ವೇಳೆ ಬೆಟ್ಟಗಳ ಮಣ್ಣು ಜಲಾಶಯ, ನದಿಗಳಲ್ಲಿ ತುಂಬಿ ಹೋಗಿತ್ತು. ಕೊಡಗಿನ ಏಕೈಕ ಹಾರಂಗಿ ಜಲಾಶಯದಲ್ಲಿ 7 ರಿಂದ 8 ಅಡಿಯಷ್ಟು ಮಣ್ಣು ತುಂಬಿತ್ತು. ಇದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ತೀರ ಪ್ರದೇಶದ ಗ್ರಾಮಗಳು ಜಮೀನು ಮುಳುಗಡೆಯಾಗಿದ್ದವು.
ಎರಡು ವರ್ಷಗಳಲ್ಲಿ ಹಾರಂಗಿ ಜಲಾಶಯ ಮತ್ತು ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿಕೊಂಡಿದೆ. ಕಾವೇರಿ ನದಿ ಮತ್ತು ಜಲಾಶಯದ ಹಿನ್ನೀರಿನಲ್ಲಿ ತುಂಬಿದ್ದ ಹೂಳಿನಲ್ಲಿ ಗಿಡಗಂಟಿಗಳು ಬೆಳೆದು ಕಾವೇರಿ ನದಿಯ ಸಾಕಷ್ಟು ಕಡೆ ನಡುಗಡ್ಡೆಗಳು ನಿರ್ಮಾಣವಾಗಿ, ನದಿ ಹರಿಯುವಿಕೆ ಬದಲಾಗಿದೆ.
138 ಕೋಟಿ ಮೀಸಲು ಹಣ ಎಲ್ಲಿ?:ಹಾರಂಗಿ ಜಲಾಶಯದ ಹೂಳು ಎತ್ತಲು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಹೆಚ್.ಡಿ ಕುಮಾರಸ್ವಾಮಿ ಬಜೆಟ್‍ನಲ್ಲಿ 138 ಕೋಟಿಯನ್ನು ಘೋಷಣೆ ಮಾಡಿದ್ದರು. ಬಳಿಕ ಹೂಳು ತೆಗೆಯುವುದಕ್ಕೆ ಜಲಾಶಯದಲ್ಲಿ ಸರ್ವೇ ಕೂಡ ಮಾಡಲಾಗಿತ್ತು. ಆದರೆ, ನಂತರ ಹೂಳು ಎತ್ತಲೇ ಇಲ್ಲ. ಇದೀಗ ಕಾವೇರಿ ನದಿಯಲ್ಲಿಯೂ ಹೂಳು ತುಂಬಿದ್ದು, ಜತೆಗೆ ನದಿಯಲ್ಲಿ ನೀರಿನ ಸರಾಗ ಹರಿಯುವಿಕೆಗೆ ಅಡ್ಡಿಯಾಗಿದೆ. ಸ್ವಲ್ಬ ಜೋರಾಗಿ ಮಳೆ ಬಂದರೂ ಮತ್ತೆ ಪ್ರವಾಹ ಉಂಟಾಗುವ ಅಪಾಯ ಎದುರಾಗಿದೆ ಎನ್ನುತ್ತಾರೆ ಸ್ಥಳೀಯರು.
2018ರ ಆಗಸ್ಟ್ 13, 14 ಹಾಗೂ 15ರಂದು ಹಾರಂಗಿ ಜಲಾನಯನ ಪ್ರದೇಶದಲ್ಲಿ ಬರುವ ಮಡಿಕೇರಿ, ಕಾಲೂರು, ಹೆಬ್ಬೆಟಗೇರಿ, ಮಕ್ಕಂದೂರು, ಮುಕ್ಕೋಡ್ಲು, ಹಟ್ಟಿಹೊಳೆ, ಹರದೂರು, ಹೇರೂರು ಭಾಗಗಳಲ್ಲಿ ಕುಂಭದ್ರೋಣ ಮಳೆ ಸುರಿದಿತ್ತು. ಈ ಬೆನ್ನಲ್ಲೇ ಬಹುತೇಕ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿ, ಬೆಟ್ಟದಿಂದ ಕುಸಿದು ಬಂದಿದ್ದ ಮಣ್ಣು ಹಾರಂಗಿ ಮತ್ತು ಅದರ ಉಪನದಿಗಳ ಮೂಲಕ ಜಲಾಶಯ ತಲುಪಿತ್ತು. ಹಾಗಾಗಿ ಜಲಾಶಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಹೂಳು ನಿಂತಿದ್ದರಿಂದ ನೀರಿನ ಸಂಗ್ರಹ ಪ್ರಮಾಣದಲ್ಲಿ ಕುಸಿತವಾಗಿದೆ. ಈ ಬಾರಿಯೂ ಹೂಳು ತೆಗೆಯದೇ ಇರುವ ಕಾರಣ ಹಾರಂಗಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ಪ್ರವಾಹದ ಭೀತಿ ಎದುರಾಗಿದೆ.
ಇದನ್ನೂ ಓದಿ:ಮೇ 18ರಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಳ: ಹವಾಮಾನ ಇಲಾಖೆ