ಹಾವೇರಿ:ಜಿಲ್ಲೆಯಲ್ಲಿ ನಿರಂತರ ಮಳೆಗೆ ಜನಜೀವನ ತತ್ತರಿಸಿದೆ. ಜಿಲ್ಲೆಯ ಹಲವು ಗ್ರಾಮಗಳಿಗೆ ವರದಾ ನದಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
ಹಾನಗಲ್ ತಾಲೂಕಿನ ಕೂಡಲ, ಹರವಿ, ನರೇಗಲ್, ಅಲ್ಲಾಪುರ ಗ್ರಾಮಗಳಿಗೆ ವರದಾ ನದಿ ನೀರು ನುಗ್ಗಿದೆ. ಕೂಡಲ ಗ್ರಾಮದಲ್ಲಿನ ಬಹುತೇಕ ಮನೆಗಳು ನೀರಿನಲ್ಲಿ ಆವೃತವಾಗಿವೆ. ಸಂತ್ರಸ್ತ ಕೇಂದ್ರಗಳಿಗೆ ತೆರಳುತ್ತಿರುವ ಕೂಡಲ ಗ್ರಾಮದ ಮಹಿಳೆಯರು ಪರಿಸ್ಥಿತಿ ನೆನೆದು ಕಣ್ಣೀರಿಟ್ಟರು.
ಕೂಡಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆರಂಭಿಸಿರುವ ಪರಿಹಾರ ಕೇಂದ್ರಕ್ಕೆ ಅಗತ್ಯ ವಸ್ತುಗಳನ್ನ ತೆಗೆದುಕೊಂಡು ಗ್ರಾಮಸ್ಥರು ತೆರಳಿದರು. ಮನೆಯಲ್ಲಿದ್ದ ದವಸ ಧಾನ್ಯ ಸೇರಿದಂತೆ ಬಹುತೇಕ ವಸ್ತುಗಳು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಹೀಗೆ ಎಲ್ಲಾ ಇದ್ದೂ ಇಲ್ಲದಂತಾದ ಸನ್ನಿವೇಶ ಕಂಡು ಮಹಿಳೆಯರು ಭಾವುಕರಾದರು.
ವರದಾ ನದಿ ಪ್ರವಾಹದಿಂದ ಕೇವಲ ಮನೆಗಳು ಮಾತ್ರವಲ್ಲ, ಜನರು ಹೊಟ್ಟೆಪಾಡಿಗಾಗಿ ನಂಬಿದ್ದ ಸಾವಿರಾರು ಎಕರೆ ಭೂಮಿಯೂ ಜಲಾವೃತಗೊಂಡಿವೆ. ಮನೆ ಮತ್ತು ಜಮೀನಿಗೆ ಆಗಿರುವ ಹಾನಿಗೆ ಆದಷ್ಟು ಬೇಗ ಸರ್ಕಾರ ಸೂಕ್ತ ಪರಿಹಾರ ನೀಡಿ , ಸಂಕಷ್ಟದಿಂದ ಪಾರು ಮಾಡುವಂತೆ ಜನರು ಮನವಿ ಮಾಡಿದ್ದಾರೆ.