ಹಾವೇರಿ: ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ವಿಸರ್ಜನೆ ಅಂದರೆ ಅಲ್ಲಿ ಸದ್ದು ಗದ್ದಲ ಇರಲೇಬೇಕು. ಡಿಜೆ ಸೌಂಡ್ ಜಗಮಗಿಸುವ ವಿದ್ಯುತ್ ದೀಪ, ಗುಲಾಲ ರಂಗು ಎದ್ದು ಕಾಣುತ್ತದೆ. ಪಟಾಕಿಗಳ ಅಬ್ಬರವಂತೂ ಹೇಳತಿರದು. ಆದರೆ, ಹಾವೇರಿ ನಗರದ ಸಿದ್ದದೇವಪುರದ ಸಿದ್ದಿವಿನಾಯಕ ಉತ್ಸವ ಸಮಿತಿಯೂ ವಿಭಿನ್ನವಾಗಿ ಸಾರ್ವಜನಿಕ ಗಣೇಶ ನಿಮಜ್ಜನ ನೆರವೇರಿಸಿ ಮನಸೆಳೆಯಿತು.
ಹೌದು.. ಸಿದ್ದದೇವಪುರದ ಸಿದ್ದಿವಿನಾಯಕ ಉತ್ಸವ ಸಮಿತಿ ಸದಸ್ಯರು ಗಣೇಶ ನಿಮಜ್ಜನವನ್ನು ಆನೆಯೊಂದಿಗೆ ,ಅರ್ಕೆಷ್ಟ್ರಾ, ಜಾಂಜ್ ಪದಕ, ಡೊಳ್ಳುಕುಣಿತ ಸೇರಿದಂತೆ ಜಾನಪದ ಕಲಾತಂಡಗಳೊಂದಿಗೆ ಹಾವೇರಿ ನಗರದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಹಾವೇರಿ ಹುಕ್ಕೇರಿಮಠದಿಂದ ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಂಜೆ 6 ಗಂಟೆಯವರೆಗೆ ನಗರದ ಎಲ್ಲ ಬೀದಿಗಳಲ್ಲೂ ಸಂಚರಿಸಿ ಮೆರವಣಿಗೆ ಸಮಾಪ್ತಿಗೊಂಡಿತು. ರಾತ್ರಿಯಾದರೇ ಎಲ್ಲರೂ ಮಲಗಿರುತ್ತಾರೆ ಹಗಲು ಮೆರವಣಿಗೆ ಮಾಡಿದ್ರೆ ಎಲ್ಲರೂ ನೋಡುತ್ತಾರೆ ಎಂಬ ಸದ್ಯುದ್ದೇಶದಿಂದ ಹಗಲು ಗಣೇಶ ವಿಸರ್ಜನೆ ಹಮ್ಮಿಕೊಳ್ಳುತ್ತೇವೆ ಎಂದು ಸಮಿತಿಯ ಸದಸ್ಯರು ಈಟಿವಿ ಭಾರತ್ಗೆ ತಿಳಿಸಿದರು.
ಡಿಜೆ ಸೌಂಡ್, ಪಟಾಕಿ ಮನುಷ್ಯರಲ್ಲದೇ ಪ್ರಾಣಿಪಕ್ಷಿಗಳಿಗೂ ಸಹ ಮಾರಕ. ಹೀಗಾಗಿ ಅವುಗಳ ಬಳಕೆ ನಿಷಿದ್ಧ.ಗಣೇಶ ನಿಮಜ್ಜನಹಿಂದೂ ಸಂಪ್ರದಾಯದಂತೆ ಭಕ್ತಿ ಭಾವದಿಂದ ಮರೆವಣಿಗೆ ನೆರವೇರುತ್ತದೆ. ಸಿದ್ದದೇವಪುರದ ಸಿದ್ದಿವಿನಾಯಕನ ನಿಮಜ್ಜನ ಮೆರವಣಿಗೆ ನೋಡಲು ಹಾವೇರಿ ನಿವಾಸಿಗಳು ಕಾತರದಿಂದ ಕಾಯುತ್ತಾರೆ. ಗಣೇಶನ ಮೂರ್ತಿ ಮನೆ ಮುಂದೆ ಬರುತ್ತಿದ್ದಂತೆ ಹಣ್ಣುಕಾಯಿ ನೈವಿಧ್ಯೆ ಅರ್ಪಿಸಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.