ಹಾವೇರಿ:ಜಿಲ್ಲೆ ಕೊರೊನಾ ಲಸಿಕೆ ಅಭಿಯಾನದಲ್ಲಿ ಹಿಂದುಳಿದಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಸಿಎಂ ಬೊಮ್ಮಾಯಿ ತವರಲ್ಲೇ ಕೊರೊನಾ ಲಸಿಕೆ ನಿಧಾನಗತಿಯಲ್ಲಿ ಸಾಗಿತ್ತು ಎಂಬ ಆರೋಪ ಎದುರಾಗಿತ್ತು. ಆದರೆ ಅಧಿಕಾರಿಗಳ ಪರಿಶ್ರಮದಿಂದಾಗಿ ಇದೀಗ ಜಿಲ್ಲೆಯ ಗ್ರಾಮಗಳಲ್ಲಿ ನೂರಕ್ಕೆ ನೂರರಷ್ಟು ಲಸಿಕೆ ವಿತರಣೆಯಾಗಿದೆ.
ಜಿಲ್ಲೆಯ 28 ಗ್ರಾಮಗಳು ಸಂಪೂರ್ಣ ಲಸಿಕಾಕರಣಗೊಂಡಿವೆ. ಬ್ಯಾಡಗಿ, ಹಾನಗಲ್ ಶಿಗ್ಗಾವಿ ಮತ್ತು ರಾಣೆಬೆನ್ನೂರು ತಾಲೂಕುಗಳಲ್ಲಿ ತಲಾ 4 ಗ್ರಾಮಗಳು ಲಸಿಕಾಕರಣಗೊಂಡಿವೆ. ಹಾವೇರಿ ತಾಲೂಕಿನ 6 ಗ್ರಾಮಗಳು. ಹಿರೇಕೆರೂರು ಮತ್ತು ಸವಣೂರು ತಾಲೂಕಿನ ತಲಾ 3 ಗ್ರಾಮಗಳು ಸಂಪೂರ್ಣ ಲಸಿಕಾಕರಣಗೊಂಡಿವೆ.
ಈ ಗ್ರಾಮಗಳಲ್ಲಿ ಸಹ ಮೊದ ಮೊದಲು ಜನರಿಂದ ಲಸಿಕೆಗೆ ವಿರೋಧ ವ್ಯಕ್ತವಾಗಿತ್ತು. ಗ್ರಾಮಸ್ಥರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಆದರೆ ಗ್ರಾಮ ಪಂಚಾಯತ್ ಸದಸ್ಯರು ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಲಸಿಕೆ ಕುರಿತಂತೆ ಜಾಗೃತಿ ಮೂಡಿಸಿದ್ದರು. ಹಾವೇರಿ ತಾಲೂಕಿನ ಬಿದರಗಡ್ಡಿಯಲ್ಲಿ ಎಲ್ಲರ ಸಹಕಾರದಿಂದ ಗ್ರಾಮಕ್ಕೆ ಗ್ರಾಮವೇ ಕೊರೊನಾ ಲಸಿಕೆ ಪಡೆದುಕೊಂಡಿದೆ.