ಹಾವೇರಿ:ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆ ಪ್ರಕರಣಗಳು ಅಧಿಕಗೊಳ್ಳುತ್ತಿವೆ. 2020 ರಲ್ಲಿ 84 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ 2021ರಲ್ಲಿ 111 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2022 ನವೆಂಬರ್ ತಿಂಗಳೊಳಗೆ ಜಿಲ್ಲೆಯಲ್ಲಿ 113 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದಲ್ಲಿ ರೈತರು ಅಧಿಕ ಆತ್ಮಹತ್ಯೆ ಮಾಡಿಕೊಳ್ಳುವ ಜಿಲ್ಲೆಗಳಲ್ಲಿ ಹಾವೇರಿ ಜಿಲ್ಲೆ ಸಹ ಪ್ರಮುಖವಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಪ್ರಸ್ತುತ ವರ್ಷವಂತೂ ರೈತರು ಸಮಸ್ಯೆಗಳಲ್ಲಿ ನಲುಗಿದ್ದು, ಸೆಪ್ಟಂಬರ್ ತಿಂಗಳೊಂದರಲ್ಲಿ 20 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಗಳಿಗೆ ಹಲವು ಕಾರಣಗಳಿವೆ. ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಸುರಿದ ಅತ್ಯಧಿಕ ಮಳೆ ರೈತರನ್ನ ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿಸಿದೆ.
ಆರಂಭದಲ್ಲಿ ಸುರಿದ ಬಾರಿ ಮಳೆಗೆ ಒಂದು ಬಾರಿಯಲ್ಲ ಹಲವು ಬಾರಿ ಬಿತ್ತನೆ ಮಾಡಬೇಕಾಯಿತು. ಬಿತ್ತನೆ ಮಾಡಿದ್ದ ಫಸಲುಗಳು ಇನ್ನೇನು ಕೈಗೆ ಸಿಕ್ಕಲಿವೆ ಎನ್ನುವಷ್ಟರಲ್ಲಿ ಸುರಿದ ಮಳೆ ಕೈಗೆ ಬಂದ ತುತ್ತನ್ನು ಬಾಯಿಗೆ ಬರದಂತೆ ಮಾಡಿದ್ದು ಸಹ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಇನ್ನು ರೈತರ ಒಡನಾಡಿ ಜಾನುವಾರುಗಳಿಗೆ ಕಾಣಿಸಿಕೊಂಡ ಚರ್ಮಗಂಟು ರೋಗದಿಂದ ಸಹ ಹಲವು ರೈತರು ಅಸಹಾಯಕರಾಗಿ ಸಾವಿನ ಕದ ತಟ್ಟಿದ್ದಾರೆ. ಒಂದು ಕಡೆ ಬೆಳೆ ಬಂದಿಲ್ಲ, ಇನ್ನೊಂದು ಕಡೆ ತಮ್ಮ ನೆಚ್ಚಿನ ಎತ್ತುಗಳು ಗಂಟುರೋಗದಿಂದ ನರಳುತ್ತಿದ್ದರೆ ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ರೈತರನ್ನ ಮತ್ತಷ್ಟು ನಲುಗಿಸಿದೆ.
70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ: ಸಮರ್ಪಕ ಪಶುವೈದ್ಯರಿಲ್ಲದಿರುವುದು ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ಅಧಿಕ ಮಳೆಯಿಂದ ರೈತರ ಮನೆಗಳು ಕುಸಿದಿದ್ದು, ಆ ಕಾರಣದಿಂದ ಸಹ ಕೆಲ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಸುರಿದ ಬಾರಿ ಮಳೆಗೆ ಸುಮಾರು 70 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಸರ್ಕಾರ ನೀಡಿರುವ ಬೆಳೆಪರಿಹಾರ ಸಹ ರೈತನಿಗೆ ತಲುಪದಿರುವುದರಿಂದ ರೈತರನ್ನು ಹತಾಶೆಗೊಳಿಸಿದೆ. ಅಧಿಕ ಮಳೆಯಿಂದ ಭೂಮಿಯ ಫಲವತ್ತತೆ ಹಾಳಾಗಿರುವುದು ಸಹ ರೈತನನ್ನ ದಿಕ್ಕುಗೆಡಿಸಿದೆ. ಜಿಲ್ಲೆಯಲ್ಲಿ ಸಮರ್ಪಕ ವಿದ್ಯುತ್ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಮಧ್ಯೆ ಸರ್ಕಾರ ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ಐದು ಲಕ್ಷ ರೂಪಾಯಿ ಪರಿಹಾರ ನೀಡುತ್ತೆ, ಅದರ ಬದಲು ರೈತರು ಸಾಲ ತೀರಿಸಿದರೆ ರೈತನನ್ನ ಬದುಕುಳಿಸಬಹುದು ಎನ್ನುತ್ತಾರೆ ರೈತ ಮುಖಂಡರು.
ಪೈಲಟ್ ಪ್ರಾಜೆಕ್ಟ್ ಜಾರಿಗೆ ತರಬೇಕು: ಜಿಲ್ಲೆಯನ್ನು ಪ್ರತಿನಿಧಿಸುವ ಬಸವರಾಜ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಿದ್ದಾರೆ. ಕೃಷಿ ಸಚಿವ ಬಿ. ಸಿ ಪಾಟೀಲ್ ಜಿಲ್ಲೆಯವರಾಗಿದ್ದಾರೆ. ಆದರೂ ಸಹ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳಾಗುತ್ತಿವೆ. ಸರ್ಕಾರ ಹಾವೇರಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ತಡೆಗೆ ಯಾವುದಾದರೂ ಪೈಲಟ್ ಪ್ರಾಜೆಕ್ಟ್ ಜಾರಿಗೆ ತರಬೇಕು ಎನ್ನುತ್ತಿದ್ದಾರೆ ರೈತ ಮುಖಂಡರು.
ಓದಿ:ರಾಜ್ಯದಲ್ಲಿ ಮುಂದುವರಿದ ರೈತರ ಆತ್ಮಹತ್ಯೆ ಸರಣಿ: ಸಿಎಂ ತವರು ಜಿಲ್ಲೆಯಲ್ಲೂ ಗರಿಷ್ಠ ಪ್ರಕರಣ