ಹಾವೇರಿ:ಈ ಬಾರಿ ಮಳೆ ಕೊರತೆಯಿಂದಜಿಲ್ಲೆಯ ಎಂಟು ತಾಲೂಕುಗಳನ್ನು ಭೀಕರ ಬರಗಾಲ ಆವರಿಸಿದೆ. ಜಾನುವಾರುಗಳಿಗೆ ಮೇವು, ನೀರು ನೀಡಲಾಗದೇ ರೈತರು ಅವುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಉತ್ತರ ಕರ್ನಾಟಕದ ಅತಿದೊಡ್ಡ ಜಾನುವಾರು ಸಂತೆಗಳಲ್ಲಿ ಒಂದಾದ ಹಾವೇರಿಯಲ್ಲಿ ಈಗ ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದು, ಮಾರುಕಟ್ಟೆಯ ತುಂಬೆಲ್ಲಾ ಜಾನುವಾರುಗಳೇ ಕಾಣಿಸುತ್ತಿವೆ. ರೈತರು ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳನ್ನು ಮಾರಾಟಕ್ಕೆ ತರುತ್ತಿದ್ದು ಅವುಗಳ ದರವೂ ಕಡಿಮೆಯಾಗಿದೆ.
ರೈತ ನಿಂಗಪ್ಪ ನೆಲೋಗಲ್ ಮಾತನಾಡಿ, "ಮಳೆ ಕೊರತೆಯಿಂದ ಹೊಲ, ಗದ್ದೆಗಳು ಒಣಗಿವೆ. ದನ-ಕರುಗಳಿಗೆ ಮೇವಿಲ್ಲ. ಕೆರೆಯಲ್ಲಿ ನೀರಿಲ್ಲ. ಹೀಗಾಗಿ ತುಂಬಾ ಸಮಸ್ಯೆಯಾಗಿದೆ. ಲಕ್ಷಾಂತರ ರೂಪಾಯಿ ಬೆಲೆಯ ಎತ್ತುಗಳನ್ನು ಐವತ್ತರವತ್ತು ಸಾವಿರ ರೂಪಾಯಿಗೆ ಮಾರುತ್ತಿದ್ದೇವೆ. ಸರ್ಕಾರ ಜಾನುವಾರುಗಳಿಗಾಗಿ ಗೋಶಾಲೆ ತೆರೆದು, ರೈತರ ಸಾಲ ಮನ್ನಾ ಮಾಡಿದರೆ ರೈತರು ಉಳಿಯುತ್ತಾರೆ. ಕೆರೆಗಳಿಗೆ ನೀರು ಹಾಯಿಸಿದರೆ ಜಾನುವಾರುಗಳನ್ನು ಪೋಷಿಸಲು ಅನುಕೂಲವಾಗುತ್ತದೆ" ಎಂದರು.
ರೈತ ಜಂಬಯ್ಯ ಹಿರೇಮಠ ಮಾತನಾಡಿ, "60 ಸಾವಿರ ರೂಪಾಯಿ ಇರುವ ಜಾನುವಾರುಗಳನ್ನು ಕೇವಲ 20 ಸಾವಿರಕ್ಕೆ ಕೊಳ್ಳುತ್ತಿದ್ದಾರೆ. ಹೀಗಾಗಿ ಸರ್ಕಾರ ಜಾನುವಾರುಗಳಿಗೆ ಮೇವು ಒದಗಿಸಿಕೊಟ್ಟರೆ ರೈತರಿಗೆ ಉಪಕಾರವಾಗುತ್ತದೆ" ಎಂದು ಹೇಳಿದರು.
ತುಂಗಾ ಕಾಲುವೆ ನೀರಿನಿಂದ ರೈತ ಕಂಗಾಲು:ಮತ್ತೊಂದೆಡೆ, ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ದ್ಯಾಮಪ್ಪ ತಿಮ್ಮಪ್ಪ ಐಗಳ ಎಂಬ ರೈತ ಸುಮಾರು 9 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಬೆಳೆ ಚೆನ್ನಾಗಿ ಬಂದಿದೆ. ಮೆಕ್ಕೆಜೋಳ ತೆನೆ ಬಿಡುವ ವೇಳೆಗೆ ಪಕ್ಕದಲ್ಲಿನ ತುಂಗಾ ಮೇಲ್ದಂಡೆ ಕಾಲುವೆಯಿಂದ ರೈತನ ಜಮೀನಿಗೆ ನೀರು ಬರಲಾರಂಭಿಸಿತ್ತು. ಪರಿಣಾಮ ತೆನೆಗಳು ಜೊಳ್ಳುಜೊಳ್ಳಾಗಿದ್ದವು. 9 ಎಕರೆ ಜಮೀನಿನಲ್ಲಿ ನೀರು ನಿಂತಿದ್ದು ಗೋವಿನಜೋಳದ ರವದಿ ಕೊಳೆಯಲಾರಂಭಿಸಿದೆ.
ದ್ಯಾಮಪ್ಪ ತಿಮ್ಮಪ್ಪ ಐಗಳ ಮಾತನಾಡಿ, "ಎಕರೆಗೆ 40 ಸಾವಿರ ರೂಪಾಯಿ ಖರ್ಚು ಮಾಡಿ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತಿದ್ದೆ. ಬೆಳೆ ಚೆನ್ನಾಗಿ ಬಂದಿತ್ತು. ಒಳ್ಳೆಯ ಸಮಯಕ್ಕೆ ತೆನೆಯೂ ಒಡೆಯಲಾರಂಭಿಸಿತ್ತು. ಅಷ್ಟರಲ್ಲಿ ಪಕ್ಕದಲ್ಲಿ ಹಾದುಹೋಗಿರುವ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯಲ್ಲಿ ಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದಾರೆ. ಇದರಿಂದ ತಗ್ಗಿನಲ್ಲಿರುವ ನನ್ನ ಜಮೀನಿನಲ್ಲಿ ನೀರು ನಿಂತಿದೆ. ನನ್ನ ಜಮೀನಿಗಿಂತ ಎತ್ತರದಲ್ಲಿರುವ ರೈತರು ಅಧಿಕಾರಿಗಳಿಂದ ಪರಿಹಾರಧನ ಪಡೆದಿದ್ದಾರೆ. ಆದರೆ ನನಗೆ ಮಾತ್ರ ಯಾವುದೇ ಪರಿಹಾರ ಬಂದಿಲ್ಲ. ಈ ಕುರಿತಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಯುಟಿಪಿ ಕಚೇರಿಗೆ ಅಲೆದೂ ಅಲೆದು ಸಾಕಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ" ಎಂದು ಅಳಲು ತೋಡಿಕೊಂಡಿದ್ದರು.
ಇದನ್ನೂ ಓದಿ:ಹೆಚ್ಚುವರಿಯಾಗಿ 22 ತಾಲೂಕುಗಳು 'ಬರ ಪೀಡಿತ': ರಾಜ್ಯ ಸರ್ಕಾರ ಘೋಷಣೆ