ಹಾವೇರಿ : ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಡ್ಲಾಪುರ ಗ್ರಾಮಸ್ಥರಿಗೆ ಮಳೆಗಾಲ ಬಂದರೆ ಸಾಕು ಆತಂಕ ಮನೆ ಮಾಡುತ್ತದೆ. ಇವರ ಆತಂಕಕ್ಕೆ ಕಾರಣ ತಮ್ಮ ಜಮೀನು ಬಳಿ ಇರುವ ಕೆರೆ. ಈ ಗ್ರಾಮದ 150 ಕ್ಕೂ ಅಧಿಕ ರೈತರು ಕೆರೆಯ ಪಕ್ಕದಲ್ಲಿ ಸುಮಾರು ಇನ್ನೂರು ಎಕರೆ ಜಮೀನು ಹೊಂದಿದ್ದಾರೆ. ಮಳೆಗಾಲ ಬಂದರೆ ಸಾಕು ಜಮೀನಿನ ಪಕ್ಕದಲ್ಲಿನ ಕೆರೆ ತುಂಬಿ ಜಮೀನು ಮತ್ತು ಗ್ರಾಮದ ಸಂಪರ್ಕ ಕಡಿತಗೊಳ್ಳುತ್ತಿದೆ. ಮಳೆಗಾಲ ಕಡಿಮೆಯಾಗಿ ಕೆರೆ ನೀರು ಕಡಿಮೆಯಾಗುವವರೆಗೊ ಇವರಿಗೆ ಜಮೀನಿಗೆ ಹೋಗಲು ದಾರಿಯಿಲ್ಲದಂತಾಗುತ್ತಿದೆ.
ಸುಮಾರು ಎರಡು ಕಿ.ಮೀ ಉದ್ದವಿರುವ ಕೆರೆಯನ್ನು ದಾಟಿ ಬರಲು ಇವರಿಗೆ ಪರ್ಯಾಯ ಮಾರ್ಗವಿಲ್ಲ. ಇದರಿಂದಾಗಿ ಈ ಗ್ರಾಮಸ್ಥರು ಮಳೆಗಾಲ ಬಂದರೆ ಕೃಷಿ ಕಾರ್ಯ ಮಾಡಲು ಪರದಾಡುತ್ತಾರೆ. ಬೆಳೆಗಳಿಗೆ ಗೊಬ್ಬರ, ಕೀಟನಾಶಕ, ಕಳೆ ತೆಗೆಯಲು ಮತ್ತು ಬೆಳೆದ ಉತ್ಪನ್ನಗಳನ್ನು ತರಲು ಇವರಿಗೆ ತೆಪ್ಪವನ್ನು ಅವಲಂಬಿಸಬೇಕಾಗಿದೆ. ಈಜು ಬರುವ ರೈತರು ಈಜಿ ತಮ್ಮ ಜಮೀನುಗಳಿಗೆ ತೆರಳುತ್ತಾರೆ. ಈಜು ಬಾರದ ರೈತರು ಜೀವ ಕೈಯಲ್ಲಿಡಿದು ಹಗ್ಗದ ಸಹಾಯದಿಂದ ತೆಪ್ಪದ ಸಹಾಯದಿಂದ ಜಮೀನಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.