ಹಾವೇರಿ: ರಾಷ್ಟ್ರೀಯ ಹೆದ್ದಾರಿ 4ರ ಸರ್ವಿಸ್ ರಸ್ತೆಯ ಮೇಲೆ ರೈತರು ಮೆಕ್ಕೆಜೋಳ ಸೇರಿದಂತೆ ಕಾಳುಗಳನ್ನು ಒಣಗಿಸುತ್ತಿದ್ದಾರೆ. ಇದರಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಜೊತೆಗೆ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.
ಬೆಳೆ ಒಣಗಿಸಲು ರಸ್ತೆಯನ್ನೇ ಕಣ ಮಾಡಿಕೊಂಡ ರೈತರು; ವಾಹನ ಸಂಚಾರಕ್ಕೆ ಅಡಚಣೆ - ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮನವಿ
ಹಾವೇರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಮೇಲೆಯೇ ರೈತರು ಭರ್ಜರಿಯಾಗಿ ಬೆಳೆ ರಾಶಿಯಲ್ಲಿ ತೊಡಗಿದ್ದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಪ್ಪು ಟಾರ್ಪಲ್‌ನಿಂದ ಬೆಳೆಗಳ ರಾಶಿಯನ್ನು ಮುಚ್ಚಿರುತ್ತಾರೆ. ರಾತ್ರಿ ವೇಳೆ ಸರಿಯಾಗಿ ಕಾಣದ ಕಾರಣ ಅಪಘಾತಗಳು ಸಂಭವಿಸುತ್ತಿವೆ. ರೈತರು ಆದಷ್ಟು ದವಸ-ಧಾನ್ಯಗಳನ್ನು ಜಮೀನಿನಲ್ಲಿ ಮಾಡಿರುವ ಕಣಗಳಲ್ಲಿ ಹಸನು ಮಾಡಬೇಕು. ಇದರಿಂದ ಕಳ್ಳತನವೂ ತಪ್ಪುತ್ತದೆ. ಅಲ್ಲದೆ,ಬೆಳೆ ಕೂಡಾ ಸ್ವಚ್ಛವಾಗಿರುತ್ತವೆ ಎಂದು ಸಲಹೆ ನೀಡಿದರು.
ಈ ಕುರಿತು ರೈತರನ್ನು ಕೇಳಿದ್ರೆ, ಬರ ಹಾಗೂ ನೆರೆಯಿಂದ ನಾವು ಕಂಗೆಟ್ಟಿದ್ದೇವೆ. ಕಣಗಳನ್ನು ಮಾಡುವಷ್ಟು ವ್ಯವದಾನವೂ ಇಲ್ಲ. ಜೊತೆಗೆ, ಸಮಯದ ಅಭಾವವಿರುವ ಕಾರಣ ಈ ರೀತಿ ರಸ್ತೆಗಳನ್ನೇ ಕಣಗಳನ್ನಾಗಿ ಮಾಡಿ ದವಸ-ಧಾನ್ಯ ಹಸನು ಮಾಡುತ್ತಿದ್ದೇವೆ. ಅಪಘಾತಗಳನ್ನು ತಡೆಯಲು ಹೆಚ್ಚು ಕಾಳಜಿ ವಹಿಸುತ್ತೇವೆ. ರಾತ್ರಿ ವೇಳೆ ವಾಹನ ಸವಾರರಿಗೆ ತೊಂದರೆಯಾಗದಂತೆ ರಿಫ್ಲೆಕ್ಟರ್ ಅಳವಡಿಸುವ ಚಿಂತನೆಯಲ್ಲಿದ್ದೇವೆ ಎನ್ನುತ್ತಾರೆ.