ಹಾವೇರಿ: ರಾಜ್ಯದಲ್ಲಿ ಬರಗಾಲದಿಂದ ತತ್ತರಿಸಿರುವ ರೈತರಿಗೆ ಸರ್ಕಾರ 2000 ರೂಪಾಯಿ ಬರ ಪರಿಹಾರ ನೀಡಲು ಮುಂದಾಗಿದೆ. ಆದರೆ ಇದಕ್ಕೆ ಹಾವೇರಿ ಜಿಲ್ಲೆ ಸವಣೂರು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ರೈತರನ್ನು ಭಿಕ್ಷುಕರಂತೆ ನೋಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸರ್ಕಾರ ರೈತರಿಗೆ ಪರಿಹಾರವಾಗಿ 2 ಸಾವಿರ ರೂಪಾಯಿ ನೀಡುವುದು ಬೇಡ, ತಾವೇ ಒಂದು ಸಾವಿರ ರೂಪಾಯಿಯನ್ನು ಸರ್ಕಾರಕ್ಕೆ ನೀಡುವುದಾಗಿ ಆಕ್ರೋಶ ಹೊರಹಾಕಿದ್ದಾರೆ. ನಂತರ ಐವತ್ತಕ್ಕೂ ಅಧಿಕ ರೈತರು ತಮ್ಮ ಕೈಯಲ್ಲಿ 500 ಮುಖಬೆಲೆಯ ನೋಟುಗಳನ್ನು ಹಿಡಿದು ಅಣುಕು ಪ್ರದರ್ಶನ ಮಾಡಿದರು.
ಮುಂಗಾರು ಪೂರ್ವ ಹಿನ್ನೆಲೆ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಲಾಗಿತ್ತು. ಆಗ ಮಳೆ ಕೈಕೊಟ್ಟಿತ್ತು. ಮುಂಗಾರು ಪೂರ್ವ ಕೈಕೊಟ್ಟಿದ್ದರಿಂದ ಮತ್ತೆ ಮುಂಗಾರು ಮಳೆಗೆ ಬಿತ್ತನೆ ಮಾಡಲಾಯಿತು. ಆಗಲೂ ವರುಣನ ಅವಕೃಪೆಯಿಂದ ಇದ್ದ ಬೆಳೆಯನ್ನು ಕಳೆದುಕೊಳ್ಳಬೇಕಾಯಿತು. ಕೊನೆಯ ಪಕ್ಷ ಹಿಂಗಾರು ಬೆಳೆಗೆ ಜಮೀನು ಸಿದ್ಧಪಡಿಸಿಟ್ಟುಕೊಳ್ಳಲಾಯಿತು. ಆದರೆ ಹಿಂಗಾರು ಕೂಡ ಕೈಕೊಟ್ಟಿತು. ಸದ್ಯ ಒಂದು ಎಕರೆಗೆ ಬಿತ್ತನೆ ಮಾಡಲು ಪ್ರತಿಯೊಬ್ಬ ರೈತರು 10 ಸಾವಿರದಿಂದ ಹಿಡಿದು 20 ಸಾವಿರದವರೆಗೆ ಹಣ ಖರ್ಚು ಮಾಡಿದ್ದೇವೆ. ಗೊಬ್ಬರ ಆಳುಹೂಳು ಎಂದು ಎಕರೆಗೆ ಸುಮಾರು 25 ಸಾವಿರ ರೂಪಾಯಿ ಹಣ ಖರ್ಚು ಮಾಡಿದ್ದೇವೆ ಎಂದರು.