ಹಾವೇರಿ : ಜಿಲ್ಲೆಯಲ್ಲಿ ರವಿವಾರ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಿಲ್ಲೆ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿಯಲ್ಲಿ ಗಿರೀಶ್ ಮುರ್ಡೆಪ್ಪನವರ್ ಮೃತಪಟ್ಟಿದ್ದರೆ, ಮತ್ತೊಂದು ಕಡೆ ಬ್ಯಾಡಗಿ ತಾಲೂಕಿನ ಶೀಡೆನೂರು ಗ್ರಾಮದ ನಾಗೇಶಪ್ಪ ಕೊಡಗದ್ದಿ (50) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಿರೀಶ್ ಬ್ಯಾಂಕ್‌ನಲ್ಲಿ ನಾಲ್ಕು ಲಕ್ಷ ರೂಪಾಯಿ ಸಾಲ ಮತ್ತು ಸೊಸೈಟಿಯಲ್ಲಿ ಎರಡು ಲಕ್ಷ ಮತ್ತು ಕೈಗಡ ಒಂದೂವರೆ ಲಕ್ಷ ಸಾಲ ಮಾಡಿದ್ದ. ತಮ್ಮ ಮನೆಯಲ್ಲಿ ಗಿರೀಶ್ ಸಾವಿಗೆ ಶರಣಾಗಿದ್ದಾರೆ. ಈ ಕುರಿತಂತೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ನಾಗೇಶಪ್ಪ ಒಂದು ಬ್ಯಾಂಕ್‌ನಲ್ಲಿ 4 ಲಕ್ಷ ರೂ. ಮತ್ತೊಂದು ಬ್ಯಾಂಕ್‌ನಲ್ಲಿ 3 ಲಕ್ಷ 80 ಸಾವಿರ ಸಾಲ ಮಾಡಿದ್ದರು. ಸಾಲ ತೀರಿಸಲು ವಿಫಲವಾಗಿ ತಮ್ಮ ಮನೆಯ ದನದ ಕೊಟ್ಟಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗೇಶಪ್ಪ ಆತ್ಮಹತ್ಯೆ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಕ್ಕೆಜೋಳ ಬೆಳೆ ನಾಶಮಾಡುತ್ತಿರುವುದು ಮಳೆಯಿಲ್ಲದೆ ಒಣಗಿದ ವಿವಿಧ ಬೆಳೆಗಳು : ಹಾವೇರಿ ಜಿಲ್ಲೆಯ ಮೇಲೆ ಮಳೆರಾಯ ಮುನಿಸಿಕೊಂಡಿದ್ದಾನೆ. ಕಳೆದ ತಿಂಗಳು ಸತತ ಸುರಿದ ಮಳೆ ಆಗಸ್ಟ್ ತಿಂಗಳಿನಲ್ಲಿ ಕೈಕೊಟ್ಟಿದೆ. ರೈತರು ಬೆಳೆದ ಗೋವಿನಜೋಳ, ಹತ್ತಿ, ಶೇಂಗಾ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳು ಒಣಗಲಾರಂಭಿಸಿವೆ.
ಈ ಮಧ್ಯೆ ಕೆಲ ರೈತರು ಹಿಂಗಾರು ಬಿತ್ತನೆಗೆ ಅಡ್ಡಿಯಾಗುತ್ತದೆ ಎಂದು ಒಣಗುತ್ತಿರುವ ಬೆಳೆಗಳನ್ನ ನಾಶ ಮಾಡುತ್ತಿದ್ದಾರೆ. ಹಾವೇರಿ ತಾಲೂಕಿನ ಚಿಕ್ಕಲಿಂಗದಳ್ಳಿ ರೈತ ಪ್ರಕಾಶ್ ಕಂಬಳಿ, ಭಾನುವಾರ ನಾಲ್ಕು ಎಕರೆಯಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳವನ್ನು ನಾಶಪಡಿಸಿದ್ದಾರೆ.
ಮಳೆರಾಯ ಅವಕೃಪೆ ಮತ್ತು ಬೆಳೆಗೆ ಕೆಂಪುರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಪ್ರಕಾಶ್ ರೋಟರ್ನಿಂದ ನಾಶಪಡಿಸಿದರು. ಮೊದಲು ಅತಿವೃಷ್ಠಿಯಿಂದ ಬೆಳೆ ಹಾಳಾಯಿತು. ಈಗ ಮಳೆ ಇಲ್ಲದೆ ಬೆಳೆ ಹಾಳಾಗುತ್ತಿದೆ.
ಬೆಳೆದ ಬೆಳೆಗೆ ರೋಗ ಹಾಗೂ ಮಳೆ ಕೊರತೆ: ಒಂದು ಲಕ್ಷಕ್ಕೂ ಅಧಿಕ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ರೋಗ ಮತ್ತು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ನಾಶಪಡಿಸುತ್ತಿರುವುದಾಗಿ ಪ್ರಕಾಶ್ ತಿಳಿಸಿದ್ದಾರೆ. ಹಿಂಗಾರು ಮಳೆಯಾದರೂ ಚೆನ್ನಾಗಿ ಬಂದರೆ ಉತ್ತಮ ಫಸಲು ಬರಬಹುದು ಎಂದು ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಮಳೆಗಾಗಿ ರೈತರ ಪ್ರಾರ್ಥನೆ : ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದ ಮಾಣಿಕವಾಡಿ ಗ್ರಾಮದ ಕೃಷ್ಣಾ ಗಾವಡಾ ಎಂಬುವವರ ಅರ್ಧ ಎಕರೆ ಜಮೀನು ಹೊಂದಿದ್ದು, ತಮ್ಮ ಪತ್ನಿ ಅನುರಾಧಾ ಜೊತೆಗೆ ಭತ್ತದ ಬಿತ್ತನೆಯಲ್ಲಿ (ಜೂನ್ 22-2023) ತೊಡಗಿದ್ದರು. ಈ ವೇಳೆ ಈಟಿವಿ ಭಾರತದೊಂದಿಗೆ ತಮ್ಮ ಸಂಕಷ್ಟ ಹೇಳಿಕೊಂಡಿದ್ದ ರೈತ ಮಹಿಳೆ ಅನುರಾಧಾ ಗಾವಡಾ, ಮಳೆ ಆಗುತ್ತೆ ಎಂಬ ನಂಬಿಕೆಯಲ್ಲಿ ಭತ್ತ ಬಿತ್ತುತ್ತಿದ್ದೇವೆ. ಮಳೆ ಆಗದಿದ್ದರೆ ಹಾನಿಯಾಗಿ ನಷ್ಟವಾಗುತ್ತದೆ. ಅರ್ಧ ಎಕರೆ ಮಾತ್ರ ನಮ್ಮದು. ಹೊಲ ಇರೋದರಿಂದ ಎತ್ತುಗಳು ಇಲ್ಲ. ಎತ್ತು ಇಲ್ಲದೇ ಇರುವುದರಿಂದ ನಮ್ಮ ಪತಿ ಕೈಯಿಂದಲೇ ಸಾಲು ಬಿಡುತ್ತಿದ್ದಾರೆ. ಹಿಂದಿನಿಂದ ನಾನು ಭತ್ತ ಬಿತ್ತುತ್ತಿದ್ದೇನೆ ಎಂದು ಹೇಳಿದ್ದರು.
ಇದನ್ನೂ ಓದಿ:ಕೈಯಿಂದಲೇ ಸಾಲು ಮಾಡಿ ಭತ್ತ ಬಿತ್ತಿದ ಗಂಡ ಹೆಂಡತಿ: ಮಳೆಗಾಗಿ ರೈತರ ಪ್ರಾರ್ಥನೆ!