ಹಾವೇರಿ: ದೀಪಾವಳಿಗೆ ಜಿಲ್ಲೆಯಲ್ಲಿ ಜಾನಪದ ಸೊಗಡಿನ ದನ ಬೆದರಿಸುವ ಕ್ರೀಡೆ ರಂಗೇರುತ್ತದೆ. ದೀಪಾವಳಿಯಿಂದ ಆರಂಭವಾಗುವ ಈ ಕ್ರೀಡೆಯು ಹಲವು ತಿಂಗಳಗಳವರೆಗೆ ಮುಂದುವರೆಯುತ್ತದೆ. ಸ್ಥಳೀಯವಾಗಿ ಕೊಬ್ಬರಿ ಹೋರಿ ಸ್ಪರ್ಧೆ ಎಂದು ಕರೆಯುತ್ತಾರೆ. ಈ ಕ್ರೀಡೆಯಲ್ಲಿ ರೈತರು ತಮ್ಮ ನೆಚ್ಚಿನ ಹೋರಿಗಳೊಂದಿಗೆ ಪಾಲ್ಗೊಳ್ಳುವರು.
ವೀರಭದ್ರೇಶ್ವರ ದೇವಸ್ಥಾನ ಮಂಡಳಿಯು ಹಲವು ವರ್ಷಗಳಿಂದ ದೀಪಾವಳಿಯ ಬಲಿಪಾಡ್ಯಮಿಯಂದು ದನ ಬೆದರಿಸುವ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯೂ ಆಡಳಿತ ಮಂಡಳಿ ಸ್ಪರ್ಧೆ ಆಯೋಜಿಸಿದೆ. ನಗರದ ಮೈಲಾರ ಮಹದೇವ ವೃತ್ತದಿಂದ ಹಾವೇರಿಯ ಹಳೂರು ಓಣಿವರೆಗೆ ಎತ್ತುಗಳನ್ನು ಓಡಿಸಲಾಯಿತು.
ಹಾವೇರಿ: ದೀಪಾವಳಿಯ ಸಂಭ್ರಮ ಹೆಚ್ಚಿಸಿದ ಕೊಬ್ಬರಿ ಹೋರಿ ಸ್ಪರ್ಧೆ ಅಲಂಕೃತ ಹೋರಿಗಳು: ಕೃಷಿ ಚಟುವಟಿಕೆಗಳಿಂದ ಕೊಂಚ ವಿರಾಮ ಪಡೆದ ರೈತರು ಸ್ಪರ್ಧೆಯಲ್ಲಿ ಉತ್ಸಾಹ ಹುಮ್ಮಸ್ಸಿನಿಂದ ಪಾಲ್ಗೊಂಡರು. ನೆಚ್ಚಿನ ಹೋರಿಗಳನ್ನು ಆಕರ್ಷಕವಾಗಿ ಅಲಂಕರಿಸಿ ಅಖಾಡಕ್ಕೆ ತಂದಿದ್ದರು. ಸರತಿಯಲ್ಲಿ ನಿಂತು ಆಯೋಜಕರು ಸೂಚನೆ ನೀಡುತ್ತಿದ್ದಂತೆ ತಮ್ಮ ಹೋರಿಗಳನ್ನು ರೈತರು ಓಡಿಸಿದರು. ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪೈಲ್ವಾನರನ್ನು ಹಿಮ್ಮೆಟ್ಟಿಸಿ ಹೋರಿಯು ಓಡುತ್ತಿದ್ದ ದೃಶ್ಯ ರೋಮಾಂಚನಕಾರಿಯಾಗಿತ್ತು. ದೀಪಾವಳಿಯ ಕಾರಣಕ್ಕಾಗಿ ಸ್ಪರ್ಧೆ ಮಾಡದೆ ಮನರಂಜನೆಗಾಗಿ ಎತ್ತುಗಳನ್ನು ಓಡಿಸಲಾಯಿತು.
ಕ್ರೀಡೆಗಾಗಿ ಹೋರಿಗಳ ವಿಶೇಷ ಆರೈಕೆ: ಈ ಎತ್ತುಗಳಿಗೆ ಕೊಂಬಣಸು, ಜೋಳ, ಗೆಜ್ಜೆ, ಗಂಟಿ, ಗಗ್ರಾ ಮತ್ತು ಕೊಬ್ಬರಿಗಳನ್ನು ಹಾಕಲಾಗುತ್ತದೆ. ಜಾನಪದ ಕ್ರೀಡೆಗೆ ಹಾವೇರಿ ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ದೂರದ ಊರುಗಳಿಂದ ರೈತರು ಎತ್ತುಗಳನ್ನು ತಂದಿದ್ದರು. ಹಬ್ಬಕ್ಕಾಗಿ ಎತ್ತುಗಳನ್ನು ವಿಶೇಷವಾಗಿ ಮೇಯಿಸಿ ದಷ್ಟಪುಷ್ಟಗೊಳಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಕೊಬ್ಬರಿ ಹೋರಿ ಓಡಿಸುವ ಸ್ಪರ್ಧೆ ನಡೆದಿರಲಿಲ್ಲ. ಗೆದ್ದ ಎತ್ತುಗಳನ್ನು ಗ್ರಾಮಕ್ಕೆ ಕರೆದುಕೊಂಡ ಹೋದ ನಂತರ ಮೆರವಣಿಗೆ ಮಾಡಲಾಯಿತು.
ಇದನ್ನೂ ಓದಿ:ಮಹಿಳೆಯರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ಶಾಸಕ ರೇಣುಕಾಚಾರ್ಯ- ವಿಡಿಯೋ