ಹಾವೇರಿ : ಜಿಲ್ಲೆಯ ರೈತರು ಸಾಂಪ್ರದಾಯಕ ಬೆಳೆಗಳಿಂದ ವಿಮುಖರಾಗುತ್ತಿದ್ದು, ಭತ್ತ, ಶೇಂಗಾ ಮತ್ತು ಹತ್ತಿಯಂತಹ ಸಾಂಪ್ರದಾಯಕ ಬೆಳೆಗಳನ್ನು ಬಿಟ್ಟು ರೇಷ್ಮೆ ಸೇರಿದಂತೆ ವಿವಿಧ ಲಾಭದಾಯಕ ಕೃಷಿಯತ್ತ ಮುಖಮಾಡುತ್ತಿದ್ದಾರೆ.
ಹಾವೇರಿ ತಾಲೂಕು ಹೊಂಬರಡಿ ಗ್ರಾಮದ ರೈತ ವೀರಪ್ಪ ಕರಚಣ್ಣನವರ್ ತೋಟಗಾರಿಕಾ ಬೆಳೆ ಬೆಳೆದು ಲಕ್ಷಾಂತರ ರೂ ಲಾಭ ಪಡೆಯುತ್ತಿದ್ದಾರೆ. ವೀರಪ್ಪ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ತಮಿಳುನಾಡಿನಿಂದ ಬಟನ್ ರೋಜ್ ತಂದು ನೆಟ್ಟಿದ್ದಾರೆ. ಇದಕ್ಕೆ ಸರ್ಕಾರದಿಂದ ನರೇಗಾ ಯೋಜನೆಯಡಿ ಎರಡು ಲಕ್ಷರೂಪಾಯಿ ಸಹಾಯಧನ ದೊರೆತಿದ್ದು, ಉತ್ತಮ ಇಳುವರಿಯೊಂದಿಗೆ ಉತ್ತಮ ಲಾಭವನ್ನು ಗಳಿಸುತ್ತಿದ್ದಾರೆ.
ಹಾವೇರಿ : ಬಟನ್ ರೋಜ್ ಬೆಳೆದು ತಿಂಗಳಿಗೆ ಲಕ್ಷಾಂತರ ರೂ ಲಾಭ ಗಳಿಸುತ್ತಿರುವ ಮಾದರಿ ರೈತ ಬಟನ್ ರೋಜ್ ಕೃಷಿಯಿಂದ ಲಕ್ಷಾಂತರ ರೂ ಆದಾಯ : ರೈತ ವೀರಪ್ಪ ತಮ್ಮ ಜಮೀನಿನಲ್ಲಿ ಐದು ಅಡಿ ಅಂತರದಲ್ಲಿ ಸುಮಾರು 6 ಸಾವಿರ ಬಟನ್ ರೋಜ್ ಸಸಿಗಳನ್ನು ನೆಟ್ಟಿದ್ದು, ಮೂರು ತಿಂಗಳ ಬಳಿಕ ಆದಾಯ ಬರಲಾರಂಭಿಸಿದೆ. ಆರಂಭದಲ್ಲಿ ಕೆಜಿಗಟ್ಟಲೆ ಬರುತ್ತಿದ್ದ ಬಟನ್ ರೋಜ್ ಇಳುವರಿ ಕೆಲವು ದಿನಗಳಲ್ಲಿ ಕ್ವಿಂಟಾಲ್ ಇಳುವರಿ ಬರುತ್ತದೆ.
ಇನ್ನು ಹಬ್ಬ,ವಿವಿಧ ಸಮಾರಂಭದ ಸಂದರ್ಭದಲ್ಲಿ ಬಟನ್ ರೋಜ್ ಬೆಲೆ 100 ರೂ ದಾಟುತ್ತದೆ. ಉಳಿದಂತೆ ನಿತ್ಯ ಕೆಜಿಗೆ 50 ರೂ.ನಿಂದ 100 ರೂಪಾಯಿವರೆಗೆ ಬೆಲೆ ಸಿಗುತ್ತದೆ. ಎರಡು ದಿನಕ್ಕೆ ಒಮ್ಮೆ ಬಟನ್ ರೋಜ್ನ್ನು ಕಟಾವು ಮಾಡಿ ಮಾರುಕಟ್ಟೆಗೆ ತರಲಾಗುತ್ತದೆ. ನಿತ್ಯ ಕನಿಷ್ಠ 20 ಕೆಜಿ ಹೂವನ್ನು ಕಡಿಮೆಯೆಂದರೆ 50 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಹೀಗೆ ನಿತ್ಯ ಹೂವನ್ನು ಮಾರಿ ಆದಾಯವನ್ನು ಪಡೆಯುತ್ತಿರುವುದಾಗಿ ರೈತ ವೀರಪ್ಪ ಹೇಳುತ್ತಾರೆ.
ರೈತ ಬೆಳೆ ಸಂಬಂಧ ಮಾಡಿದ ಸಾಲವನ್ನು ತೀರಿಸಿ, ಒಂದು ತಿಂಗಳಲ್ಲಿ ಒಂದು ಲಕ್ಷ ರೂ ಆದಾಯ ಪಡೆದಿದ್ದಾರೆ. ಅಲ್ಲದೇ ಬಟನ್ ರೋಜ್ ಗಿಡವನ್ನು ಒಂದು ಬಾರಿ ನೆಟ್ಟರೆ ಸಾಕು ಸರಿಯಾಗಿ ನಿರ್ವಹಣೆ ಮಾಡಿದರೆ 10 ವರ್ಷಗಳ ಕಾಲ ಇಳುವರಿ ನೀಡುತ್ತದೆ ಮತ್ತು ಉತ್ತಮ ಆದಾಯ ನೀಡುತ್ತದೆ ಎನ್ನುತ್ತಾರೆ ವೀರಪ್ಪ.
ಸದ್ಯ ಹಾವೇರಿ ಸ್ಥಳೀಯ ಮಾರುಕಟ್ಟೆಯಲ್ಲಿ ಬಟನ್ ರೋಜ್ ಮಾರಾಟ ಮಾಡುತ್ತಿರುವ ರೈತ ಮುಂದಿನ ದಿನಗಳಲ್ಲಿ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ಧೇಶ ಹೊಂದಿದ್ದಾರೆ. ಸರ್ಕಾರದ ಯೋಜನೆಗಳ ಸಹಾಯದಿಂದ ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿರುವ ವೀರಪ್ಪ ಉಳಿದ ರೈತರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ :ಹವಾಮಾನಕ್ಕೆ ತಕ್ಕಂತೆ ಬೆಳೆ.. ಮಿಶ್ರ ಬೇಸಾಯದಲ್ಲಿ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿರುವ ಕಲಬುರಗಿ ರೈತ