ಹಾವೇರಿ : ಜಮೀನಿನ ಪೈಪ್ಲೈನ್ ಮೇಲೆ ಮರಳು ಟ್ರ್ಯಾಕ್ಟರ್ ತರಬೇಡಿ ಎಂದಿದ್ದಕ್ಕೆ ರೈತನ ಮೇಲೆ ಹಲ್ಲೆ ಮಾಡಿರುವ ಆರೋಪ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದಲ್ಲಿ ಕೇಳಿಬಂದಿದೆ. ಹಲ್ಲೆಗೊಳಗಾದ ರೈತನನ್ನ 33 ವರ್ಷದ ಗೋಪಾಲಕೃಷ್ಣ ಐರಣಿ ಎಂದು ಗುರುತಿಸಲಾಗಿದೆ.
ಜಮೀನಿನಲ್ಲಿ ನೀರು ಹಾಯಿಸಲು ಹೋದಾಗ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡುವವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗೋಪಾಲಕೃಷ್ಣ ಅವರು ಆರೋಪಿಸಿದ್ದಾರೆ. ಜಮೀನಿನಲ್ಲಿನ ಪೈಪ್ಲೈನ್ ಒಡೆಯುತ್ತವೆ. ಮರಳು ತುಂಬಿದ ಟ್ರ್ಯಾಕ್ಟರ್ ಇಲ್ಲಿ ತರಬೇಡಿ ಎಂದಿದ್ದಕ್ಕೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂಬುದು ಗೋಪಾಲಕೃಷ್ಣ ಅವರ ಆರೋಪವಾಗಿದೆ.
ರೈತ ಗೋಪಾಲಕೃಷ್ಣನ ತಲೆಗೆ ಬಲವಾದ ಪೆಟ್ಟುಬಿದ್ದಿದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ನಡೆಸಿದ ಆರು ಆರೋಪಿಗಳ ವಿರುದ್ದ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಿಂಗರಾಜ್, ಪ್ರಜ್ವಲ್, ನಾಗರಾಜ್, ಹುಚ್ಚಪ್ಪ, ಗಣೇಶ ಮತ್ತು ರವಿ ಎಂಬುವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ದಿನದಿಂದ ದಿನಕ್ಕೆ ತುಂಗಭದ್ರಾ ನದಿ ಒಡಲು ಬಗೆಯುವವರ ಸಂಖ್ಯೆ ಅಧಿಕವಾಗುತ್ತಿದೆ. ಅಕ್ರಮ ಮರುಳುಗಾರಿಕೆಯಿಂದ ಸಾಕಷ್ಟು ಸಾವು ನೋವು ಸಂಭವಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.