ಹಾವೇರಿ :ರಾಜ್ಯದಲ್ಲಿ ವಾಲ್ಮೀಕಿ ಸಮಾಜವನ್ನ ತುಳಿದಿದ್ದೇ ಕಾಂಗ್ರೆಸ್ ಎಂದು ಮಾಜಿ ಸಚಿವ ರಾಜುಗೌಡ ಆರೋಪಿಸಿದ್ದಾರೆ. ಹಾನಗಲ್ ತಾಲೂಕಿನ ಅಕ್ಕಿ ಆಲೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಚುನಾವಣೆ ಬಂದಾಗ ನಮ್ಮ ಸಮಾಜದ ಮೇಲೆ ಪ್ರೀತಿ ತೋರಿಸುವುದು ಬೇಡ ಎಂದು ತಿಳಿಸಿದರು.
ಚುನಾವಣೆ ಬಂದಾಗ ಜಾತಿಗಳ ನಡುವೆ ಜಗಳ ಹಚ್ಚಬೇಡಿ, ನಾವು ಅಭಿವೃದ್ಧಿ ಮೇಲೆ ಮತ ಕೇಳುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಎಸ್ಟಿ ಸಮುದಾಯಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಎಸ್ಟಿ ಸಮುದಾಯದ ಎಷ್ಟು ಶಾಸಕರಿಗೆ ಸಚಿವ ಸ್ಥಾನ ನೀಡಿದ್ರು. ಬಂದೀಖಾನೆ ಬಿಟ್ರೆ ಬೇರೆ ಖಾತೆ ನೀಡಿಲ್ಲ ಎಂದು ಕಿಡಿಕಾರಿದ್ರು.
ವಾಲ್ಮೀಕಿ ಸಮುದಾಯವನ್ನು ಗುರುತಿಸಿದ್ದು ಬಿಜೆಪಿ. ಕಳೆದ ಬಾರಿ ನಮ್ಮ ಸಮುದಾಯದ ನಾಲ್ವರಿಗೆ ಸಚಿವ ಸ್ಥಾನ ನೀಡಿತ್ತು. ಈ ಬಾರಿ ಇಬ್ಬರಿಗೆ ಮಂತ್ರಿಗಿರಿ ನೀಡಿದೆ. ಕಾಂಗ್ರೆಸ್ನಲ್ಲಿ ಸತೀಶ್ ಜಾರಕಿಹೊಳಿ ಅಣ್ಣನನ್ನು ಬಳಸಿಕೊಂಡು ಏನೇನ್ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅನ್ನೋದು ನಮ್ಮ ಸಮಾಜಕ್ಕೆ ಗೊತ್ತಿದೆ.