ಹಾವೇರಿ: ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಸಾರ್ವಜನಿಕ ಸಭೆಯ ವೇದಿಕೆ ಮೇಲೆ ಕಣ್ಣೀರಿಟ್ಟ ಘಟನೆ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದಿದೆ. ಶುಕ್ರವಾರ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಹಾನಗಲ್ಗೆ ಆಗಮಿಸಿತು. ಈ ಹಿನ್ನೆಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನ ರೋಡ್ ಶೋ ಮೂಲಕ ಕರೆ ತರಲಾಯಿತು. ನಗರದ ಕುಮಾರೇಶ್ವರ ಮಠದಿಂದ ಆರಂಭವಾದ ರೋಡ್ ಶೋ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಹಳೇ ಬಸ್ ನಿಲ್ದಾಣದ ಹತ್ತಿರದ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಂದು ತಲುಪಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಜೆಡಿಎಸ್ ಧ್ವಜ ನೀಡುವ ಮೂಲಕ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ನಂತರ ಮಾತನಾಡಲು ಮುಂದಾದ ಮನೋಹರ್ ತಹಶೀಲ್ದಾರ್ ಕಾಂಗ್ರೆಸ್ ಪಕ್ಷ ನಡೆದುಕೊಂಡ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ನಾನು ಹಾಲಿ ಶಾಸಕನಾಗಿದ್ದರೂ ಸಹ ನನ್ನ ಬಿಟ್ಟು ಶ್ರೀನಿವಾಸ್ ಮಾನೆಗೆ ಹಾನಗಲ್ ಕ್ಷೇತ್ರದ ಟಿಕೆಟ್ ನೀಡಿದರು. ನನಗೆ ಎಂಎಲ್ಸಿ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೂ ಯಾವುದೇ ಸ್ಥಾನಮಾನ ನೀಡಲಿಲ್ಲ. 2021 ರಲ್ಲಿ ನಡೆದ ಉಪಚುನಾವಣೆಯಲ್ಲಿ ಸಹ ನನಗೆ ಟಿಕೆಟ್ ನೀಡಲಿಲ್ಲ. ಪಕ್ಷಕ್ಕಾಗಿ 50 ವರ್ಷ ದುಡಿದ ನನ್ನನ್ನು ಕಾಂಗ್ರೆಸ್ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದೊಂದು ಬಾರಿ ನನಗೆ ಕೊನೆಯ ಅವಕಾಶ ನೀಡಿ ಎಂದು ಮನವಿ ಮಾಡಿದ್ದೆ. ಬಳಿಕ, ಕಾಂಗ್ರೆಸ್ ನಾಯಕರು ನನ್ನ ಕಡೆ ನೋಡಲಿಲ್ಲ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದರು. ಮಾಜಿ ಸಚಿವರು ಕಣ್ಣೀರು ಹಾಕುತ್ತಿದ್ದಂತೆ ಬೆಂಬಲಿಗರು ನೀವು ಕಣ್ಣೀರು ಹಾಕಬೇಡಿ ನಿಮ್ಮೆ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.
ಇದನ್ನೂ ಓದಿ :'ನಾನು ಯಾರ ಹತ್ತಿರವೂ ಸೂಟ್‌ಕೇಸ್ ಪಡೆದಿಲ್ಲ': ಮಾಜಿ ಸಚಿವ ಮನೋಹರ್ ತಹಶೀಲ್ದಾರ್