ಹಾವೇರಿ:ಸತಿ-ಪತಿ ಇಬ್ಬರೂ ಸಾವಿನಲ್ಲಿ ಒಂದಾದ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದಿದೆ. ಪತ್ನಿ ಸಾವನ್ನಪ್ಪಿರುವುದನ್ನು ತಿಳಿದ ಬಳಿಕ ಪತಿಗೂ ಕೂಡ ಹೃದಯಾಘಾತವಾಗಿದೆ.
ಗುಡ್ಡಪ್ಪ(72) ಮತ್ತು ಅವರ ಪತ್ನಿ ಹಾಲವ್ವ (65) ಎಂಬುವರೇ ಸಾವಿನಲ್ಲಿ ಒಂದಾದ ದಂಪತಿ. ಅನಾರೋಗ್ಯದಿಂದ ಬಳಲುತ್ತಿದ್ದ ಹಾಲವ್ವಳಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಿ ಕರೆದುಕೊಂಡು ಬರಲಾಗಿತ್ತು.
ಆದರೆ, ಶುಕ್ರವಾರ ಸಂಜೆ ಹಾಲವ್ವಳಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಪತಿ ಗುಡ್ಡಪ್ಪ ಕೂಡ ಹೃದಯಾಘಾತದಿಂದ ಮೃತರಾಗಿದ್ದಾರೆ.
ಸಾವಿನಲ್ಲೂ ಒಂದಾದ ಹಾವೇರಿ ದಂಪತಿ ಗುಡ್ಡಪ್ಪ ಮತ್ತು ಹಾಲವ್ವ ದಂಪತಿ ಗ್ರಾಮದಲ್ಲಿ ಮಾದರಿ ದಂಪತಿಯಾಗಿದ್ದರು. ಯಾವಾಗಲೂ ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ, ಹಾಲವ್ವಳಿಗೆ ನೋವಾದರೆ ಗುಡ್ಡಪ್ಪ ದುಃಖಿಸುತ್ತಿದ್ದ, ಇತ್ತ ಗುಡ್ಡಪ್ಪ ನೋವಾದರೆ ಹಾಲವ್ವಳೂ ಬೇಸರಗೊಳ್ಳುತ್ತಿದ್ದಳು. ಇದೀಗ ದಂಪತಿ ಸಾವಿನಲ್ಲೂ ಒಂದಾಗಿರುವುದು ಅವರ ಮಧುರ ದಾಂಪತ್ಯಕ್ಕೆ ಸಾಕ್ಷಿ ಎಂದು ಸ್ಥಳೀಯರು ತಿಳಿಸಿದರು.
ದಂಪತಿ ಶವಗಳನ್ನು ಅಕ್ಕಪಕ್ಕದಲ್ಲಿ ಕುಳ್ಳಿರಿಸಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ನಂತರ ಎರಡು ಕೈವಾಲಿಗಳಲ್ಲಿ ಶವಗಳನ್ನು ಕುಳ್ಳಿರಿಸಿ ಟ್ರ್ಯಾಕ್ಟರ್ ಮೇಲಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ನಂತರ ಸ್ಮಶಾನದಲ್ಲಿ ಒಂದೇ ಚಿತೆಯಲ್ಲಿ ದಂಪತಿ ಶವಗಳ ಅಂತ್ಯಕ್ರಿಯೆ ನಡೆಸಲಾಗಿದೆ.
ದಂಪತಿಯ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದರು. ಸತ-ಪತಿ ಅಂದರೆ ಈ ರೀತಿ ಇರಬೇಕು ಎನ್ನುತ್ತ ಗ್ರಾಮಸ್ಥರು ಮೃತ ದಂಪತಿ ಗುಣಗಾನ ಮಾಡಿದರು. ತಂದೆ ತಾಯಿ ಕಳೆದುಕೊಂಡ ಮಕ್ಕಳ ಅಕ್ರಂದನ ಮುಗಿಲು ಮುಟ್ಟಿತ್ತು. ದೂರ ದೂರದ ಸಂಬಂಧಿಕರು ಆಗಮಿಸಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು ಕಂಬನಿ ಮಿಡಿದರು.
ಇದನ್ನೂ ಓದಿ:ಹಾಸನ ಕಾಲೇಜಿಗೂ ಕಾಲಿಟ್ಟ ಹಿಜಾಬ್-ಕೇಸರಿ ಶಾಲು ಗಲಾಟೆ