ಹಾವೇರಿ:ಜಿಲ್ಲಾ ಕೇಂದ್ರ ಹಾವೇರಿ ನಗರ ನಿವಾಸಿಗಳದ್ದು ಇದೀಗ 'ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ' ಎನ್ನುವಂತಾಗಿದೆ. ನಗರದಲ್ಲಿ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಕಣ್ಮನ ಸೆಳೆಯುವ ಉದ್ಯಾನವಿದೆ. ಆದರೆ, ಅಲ್ಲಿ ಕುಳಿತುಕೊಳ್ಳುವವರು ಅದನ್ನು ಆಸ್ವಾಧಿಸುವಂತಿಲ್ಲ. ಪುರಾತತ್ವ ಇಲಾಖೆ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ನಿಷೇಧ ಹೇರಿದೆ.
ಹಾವೇರಿಯಲ್ಲಿರುವ ಏಕೈಕ ಉದ್ಯಾನ ಅಂದ್ರೆ ಅದು ಪುರಸಿದ್ದೇಶ್ವರ ದೇವಸ್ಥಾನದ ಉದ್ಯಾನ. ಆದರೆ, ಪುರಾತತ್ವ ಇಲಾಖೆ ಈ ಕ್ರಮ ಕೈಗೊಂಡಿರುವುದು ನಗರ ನಿವಾಸಿಗಳಿಗೆ, ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ.
ಒಂದಾನೊಂದು ಕಾಲದಲ್ಲಿ ರಾಜಮನೆತನಗಳ ಆಡಳಿತಕ್ಕೆ ಒಳಗಾಗಿದ್ದ ಜಿಲ್ಲೆ, ಕದಂಬರಿಂದ ಹಿಡಿದು ಮೈಸೂರು ಅರಸರ ಕಾಲದ ಆಡಳಿತದ ಗತವೈಭವಕ್ಕೆ ಸಾಕ್ಷಿಯಾಗಿತ್ತು. ಇಂತಹುದರಲ್ಲಿ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗಿರುವ ಪುರಸಿದ್ದೇಶ್ವರ ದೇವಸ್ಥಾನದ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಿತವಾದ ದೇವಸ್ಥಾನ ಇದೀಗ ಪುರಾತತ್ವ ಇಲಾಖೆಯ ಆಡಳಿತದಲ್ಲಿದೆ.
ಹಾವೇರಿಗರಿಗಿಲ್ಲ ಸೌಂದರ್ಯ ಸವಿಯುವ ಭಾಗ್ಯ ಯಾರೋ ಕಿಡಿಗೇಡಿಗಳು ಉದ್ಯಾನವನವನ್ನು ಹಾಳು ಮಾಡಿದ್ದರಿಂದ ಪುರಾತತ್ವ ಇಲಾಖೆ ಸಾರ್ಜನಿಕರಿಗೆ ಮತ್ತು ಪ್ರವಾಸಿಗರಿಗೆ ವಿಶ್ರಾಂತಿ ಪಡೆಯಲು ಬಿಡುತ್ತಿಲ್ಲ. ಇದರ ಬದಲು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲಿ. ಬೇಕಾದರೇ ಉದ್ಯಾನದಲ್ಲಿ ಕುಳಿತುಕೊಳ್ಳುವ ಜನರಿಗೆ ಪ್ರವೇಶ ಧನ ನಿಗದಿ ಮಾಡಲಿ. ಆದರೆ, ಉದ್ಯಾನ ಪ್ರವೇಶ ನಿಷೇಧಿಸಿರುವ ಕ್ರಮ ತಪ್ಪು ಎಂಬುದು ಸ್ಥಳೀಯರ ವಾದವಾಗಿದೆ.
ಸ್ಥಳೀಯ ಉದ್ಯಾನದ ಹುಲ್ಲು ಕುಳಿತರೆ ಹಾಳಾಗುತ್ತದೆ ಅಂದರೆ ಹುಲ್ಲು ಹಾಸಿನ ಮೇಲೆ ಅಲ್ಲಲ್ಲಿ ಸಿಮೆಂಟಿನ ಆಸನದ ವ್ಯವಸ್ಥೆ ಮಾಡಲಿ. ಅದನ್ನು ಬಿಟ್ಟು ಉದ್ಯಾನದ ಪ್ರವೇಶ ನಿಷೇಧಿಸಿರುವುದು ನಗರ ನಿವಾಸಿಗಳಿಗೆ ಬೇಸರ ತರಿಸಿದೆ. ಜಿಲ್ಲಾ ಕೇಂದ್ರದಲ್ಲಿರುವ ಸುಂದರವಾದ ಉದ್ಯಾನದ ಸೌಂದರ್ಯ ಸವಿಯಲು ಅವಕಾಶ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.