ಕರ್ನಾಟಕ

karnataka

ETV Bharat / state

ಹಾವೇರಿ ನಗರಸಭೆಯಲ್ಲಿ ಮೂಲೆಗುಂಪಾದ ₹46 ಲಕ್ಷ ಮೌಲ್ಯದ ಕಸದ ಡಬ್ಬಿ! - ಶಾಸಕ ನೆಹರು ಓಲೇಕಾರ್

ಹಾವೇರಿ ನಗರಸಭೆ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 46 ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಿದ್ದ 32 ಸಾವಿರ ಕಸದ ಡಬ್ಬಿಗಳು ಮೂಲೆಗುಂಪಾಗಿವೆ.

ಹಾವೇರಿ ನಗರಸಭೆ
ಹಾವೇರಿ ನಗರಸಭೆ

By

Published : Aug 8, 2023, 10:34 PM IST

ಕಸದ ಡಬ್ಬಿ ವಿತರಣೆ ಮಾಡುವಂತೆ ಸ್ಥಳೀಯ ಪ್ರಭು ಹಿಟ್ನಳ್ಳಿ ಅವರು ಒತ್ತಾಯಿಸಿದ್ದಾರೆ

ಹಾವೇರಿ :ನಗರ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಹಾವೇರಿ ನಗರಸಭೆ ಶ್ರಮಿಸುತ್ತಿದೆ. ಪ್ರತಿನಿತ್ಯ 10 ಟನ್​ಗೂ ಅಧಿಕ ತ್ಯಾಜ್ಯ ನಗರದಲ್ಲಿ ಉತ್ಪಾದನೆಯಾಗುತ್ತಿದೆ. ಈ ಕಸವನ್ನು ಹಸಿಕಸ ಮತ್ತು ಒಣಕಸ ಎಂದು ವಿಂಗಡಿಸುವುದು ನಗರಸಭೆಯ ಕಾರ್ಮಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಈ ನಿಟ್ಟಿನಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಮೂಲದಲ್ಲಿಯೇ ಪ್ರತ್ಯೇಕಿಸುವ ಉದ್ದೇಶದಿಂದ ನಗರಸಭೆ ಮನೆ-ಮನೆಗೆ ಉಚಿತವಾಗಿ ಎರಡು ಕಸದ ಡಬ್ಬಿ ವಿತರಿಸುವ ಯೋಜನೆ ಹಾಕಿಕೊಂಡಿತ್ತು. ಆದರೀಗ ನಗರಸಭೆ ವತಿಯಿಂದ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 46 ಲಕ್ಷ ರೂಪಾಯಿ ವೆಚ್ಚದಲ್ಲಿ ಖರೀದಿಸಿದ್ದ 32 ಸಾವಿರ ಕಸದ ಡಬ್ಬಿಗಳು ಮೂಲೆ ಸೇರಿವೆ.

ಹಾವೇರಿ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್​ಗಳಲ್ಲಿ 16,175 ಮನೆಗಳಿವೆ. ಎಲ್ಲ ಮನೆಗಳಿಗೆ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಕೊಡಲು 10 ಲೀಟರ್ ಸಾಮರ್ಥ್ಯದ ಎರಡು ಡಸ್ಟ್ ಬಿನ್‌ ವಿತರಿಸುವ ಕಾರ್ಯಕ್ಕೆ ಅಂದಿನ ಶಾಸಕ ನೆಹರು ಓಲೇಕಾರ್ ಮಾರ್ಚ್‌ನಲ್ಲಿ ಚಾಲನೆ ನೀಡಿದ್ದರು. ಆದರೆ, ಈವರೆಗೆ ಜನರಿಗೆ ತಲುಪಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿಲ್ಲ. ನಾಲ್ಕೈದು ತಿಂಗಳಿಂದ ಕಸದ ಡಬ್ಬಿಗಳನ್ನು ಗೂಗಿಕಟ್ಟಿಯ ಹೈಟೆಕ್ ರಂಗಮಂದಿರದಲ್ಲಿ ಇಡಲಾಗಿದೆ.

ಹಸಿ, ಒಣ ಕಸ ವಿಂಗಡಣೆ ಸುಲಭ:''ಹಾವೇರಿ ನಗರದಲ್ಲಿ ಪ್ರತಿಯೊಂದು ಮನೆಗೂ ಡಸ್ಟ್​ಬಿನ್​ ಕೊಡಬೇಕೆಂದು ಹೇಳಿ ನಗರಸಭೆಯಿಂದ ಸುಮಾರು 46 ಲಕ್ಷ ರೂನಲ್ಲಿ ಡಸ್ಟ್​ಬಿನ್ ಖರೀದಿ ಮಾಡಿದ್ದಾರೆ. ಆದರೆ ಅವುಗಳಿನ್ನೂ ಗೊಡಾನ್​ನಲ್ಲಿ ಕೊಳೆಯುತ್ತಿವೆ. ಅವುಗಳನ್ನು ಪ್ರತಿ ಮನೆಗೂ ಕೊಟ್ಟರೆ ಅವುಗಳನ್ನು ಹಸಿ ಹಾಗೂ ಒಣ ಎಂದು ವಿಂಗಡಣೆ ಮಾಡಿ ಕೊಡಲಿಕೆ ಅನುಕೂಲವಾಗಲಿದೆ. ಈ ಕುರಿತಂತೆ ಅಧಿಕಾರಿಗಳನ್ನು ಕೇಳಿದರೆ, ಡಸ್ಟ್ ಬಿನ್ ಬಂದಾಗ ಚುನಾವಣೆ ನೀತಿ ಸಂಹಿತೆ ಇದ್ದುದರಿಂದ ವಿತರಣೆ ಮಾಡಲಾಗಿಲ್ಲ ಎಂದು ಹೇಳುತ್ತಾರೆ. ಆದರೆ, ಚುನಾವಣಾ ನೀತಿ ಸಂಹಿತೆ ಮುಗಿದು ಎರಡು ತಿಂಗಳಾಗುತ್ತಾ ಬಂದಿದ್ದರೂ ಡಸ್ಟ್ ಬಿನ್ ಯಾಕೆ ವಿತರಿಸಿಲ್ಲ" ಎಂದು ಸ್ಥಳೀಯ ಪ್ರಭು ಹಿಟ್ನಳ್ಳಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ತಡೆಯಾಜ್ಞೆ ತಂದ ಬಿಲ್ಡರ್ಸ್: ಪಂಚಾಯಿತಿಗಳ‌ ವ್ಯಾಪ್ತಿಯಲ್ಲಿ ಕಸ ಸಮಸ್ಯೆ ವಿಲೇವಾರಿ ಯೋಜನೆಗೆ ಅಡೆತಡೆ

ಏಲಕ್ಕಿ ಕಂಪಿನ ನಗರಿಯಲ್ಲಿ ಅಸ್ವಚ್ಛತೆ : ಹಾವೇರಿ ನಗರದ ನೈರ್ಮಲ್ಯ ಕಾಪಾಡಬೇಕಿದ್ದ ನಗರಸಭೆ ನಿರ್ಲಕ್ಷ್ಯದಿಂದ ನಗರ ಮತ್ತಷ್ಟು ಸೌಂದರ್ಯ ಕಳೆದುಕೊಳ್ಳುತ್ತಿದೆ. ನಾಗರಿಕರು ಹಸಿ ಮತ್ತು ಒಣ ಕಸ ಎಲ್ಲೆಂದರಲ್ಲಿ ಹಾಕುತ್ತಿದ್ದು, ಏಲಕ್ಕಿ ಕಂಪಿನ ನಗರಿಯಲ್ಲಿ ಅಸ್ವಚ್ಛತೆ ಎದ್ದು ಕಾಣುತ್ತಿದೆ. ಈಗಲಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ನಾಗರಿಕರಿಗೆ ಡಸ್ಟ್ ಬಿನ್ ವಿತರಿಸಬೇಕು. ಆ ಮೂಲಕ ನಗರದ ಸೌಂದರ್ಯ ಮತ್ತು ಸ್ವಚ್ಛತೆ ಕಾಪಾಡಬೇಕಿದೆ ಎಂಬುದು ಸ್ಥಳೀಯರ ಒತ್ತಾಯ.

ಇದನ್ನೂ ಓದಿ:ಗೋಕರ್ಣದಲ್ಲಿ ಹೆಚ್ಚಿದ ಕಸದ ರಾಶಿ: ರಾಷ್ಟ್ರೀಯ ಹಸಿರು ನ್ಯಾಯ ಪೀಠದಿಂದ ನೋಟಿಸ್

ABOUT THE AUTHOR

...view details