ಹಾವೇರಿ: ಜಾತಿ ಜನಗಣತಿ ಬಿಡುಗಡೆ ಮಾಡಿದ ದಿನವೇ ರಾಜ್ಯದಲ್ಲಿ ಕಾಂಗ್ರೆಸ್ ಇರುವುದಿಲ್ಲ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ಹಾವೇರಿಯಲ್ಲಿಂದು ಮಾತನಾಡಿದ ಅವರು, ಜಾತಿ ಜನಗಣತಿ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಈವರೆಗೂ ಯಾವ ಪ್ರಧಾನಿಗಳು ಜಾತಿಗಣತಿ ಮಾಡಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಗಣತಿ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ಅದಕ್ಕೂ ಮೊದಲೇ ಬಿಹಾರ ಮತ್ತು ರಾಜ್ಯದಲ್ಲಿ ಜಾತಿಗಣತಿ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ 163 ಕೋಟಿ ರೂ. ವೆಚ್ಚ ಮಾಡಿ ಕಾಂತರಾಜ್ ನೇತೃತ್ವದ ಸಮಿತಿಯಿಂದ 7 ವರ್ಷಗಳ ಹಿಂದೆ ವರದಿ ಪಡೆದಿದ್ದರು. ಆಗ ಏಕೆ ಸಿದ್ದರಾಮಯ್ಯ ಜಾತಿ ಗಣತಿ ಬಿಡುಗಡೆ ಮಾಡಲಿಲ್ಲ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಾದರೂ ಈ ವರದಿ ಬಿಡುಗಡೆ ಮಾಡಬೇಕಿತ್ತು. ಈಗ ಅಧಿಕಾರಕ್ಕೆ ಬಂದು ಆರು ತಿಂಗಳಾಯಿತು, ಜಾತಿಗಣತಿ ಬಿಡುಗಡೆ ಏಕೆ ಮಾಡಲಿಲ್ಲ? ಹಿಂದುಳಿದ ಮತ್ತು ದಲಿತ ಮಠಗಳ ಒಕ್ಕೂಟದ ಮಠಾಧೀಶರು ಸಿದ್ದರಾಮಯ್ಯರನ್ನು ಕೇಳಿದಾಗ ನವೆಂಬರ್ನಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಈಗಲೂ ಬಿಡುಗಡೆ ಮಾಡಲಿಲ್ಲ. ಈಗ ಲಿಂಗಾಯತರು, ಒಕ್ಕಲಿಗರು ಜಾತಿ ಗಣತಿ ವೈಜ್ಞಾನಿಕವಾಗಿಲ್ಲ ಎನ್ನುತ್ತಿದ್ದಾರೆ. ಕಾಂತರಾಜ್ ಸಮಿತಿಯ ಕಾರ್ಯದರ್ಶಿ ಸಹಿ ಮಾಡಿಲ್ಲ, ಓರಿಜನಲ್ ಪ್ರತಿ ಕೂಡ ಕಳ್ಳತನವಾಗಿದೆ ಎನ್ನುತ್ತಿದ್ದಾರೆ. ಈಗ ಜಯಪ್ರಕಾಶ್ ಹೆಗಡೆಯವರಿಗೆ ಹೆಚ್ಚಿನ ಕಾಲಾವಕಾಶ ಕೇಳುವಂತೆಯೂ ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.
ಸರ್ಕಾರ ಕೇಳಿದ ದಿನವೇ ವರದಿ ನೀಡುವುದಾಗಿ ಜಯಪ್ರಕಾಶ್ ಹೆಗಡೆ ಕೂಡ ತಿಳಿಸಿದ್ದರು. ಇದೀಗ ಕಾರಣಗಳನ್ನು ಹುಟ್ಟುಹಾಕಲಾಗುತ್ತಿದೆ. ಈ ಜಾತಿ ಗಣತಿ ಗೊಂದಲವನ್ನು ಶುರು ಮಾಡಿದ್ದೇ ಕಾಂಗ್ರೆಸ್. ಇದರಲ್ಲಿ ಬಿಜೆಪಿಯ ಪಾತ್ರವಿಲ್ಲ. ವರದಿ ಬಿಡುಗಡೆ ಮಾಡಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಚಾಂಪಿಯನ್ ಎನ್ನಿಸಿಕೊಳ್ಳಲು ಹೊರಟಿದ್ದರು. ಆದರೆ, ಈ ಜಾತಿ ಗಣತಿಯನ್ನು ಆರಂಭದಲ್ಲಿಯೇ ಬಿಡುಗಡೆ ಮಾಡಿದ್ದರೇ ಈ ಸಮಸ್ಯೆಗಳು ಆಗುತ್ತಿರಲಿಲ್ಲ ಎಂದು ಈಶ್ವರಪ್ಪ ಹೇಳಿದರು.