ಹಾವೇರಿ:ದೀಪಗಳ ಹಬ್ಬ ದೀಪಾವಳಿ ಬಂತೆಂದ್ರೆ ಹಾವೇರಿ ಜಿಲ್ಲೆಯಲ್ಲಿ ದನ ಬೆದರಿಸುವ ಸ್ಪರ್ಧೆಯ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಜಿಲ್ಲೆಯ ಜಾನಪದ ಸೊಗಡಿನ ಕ್ರೀಡೆಗಳಲ್ಲಿ ಒಂದಾಗಿರುವ (ಹೋರಿ) ದನ ಬೆದರಿಸುವ ಸ್ಪರ್ಧೆಗೆ ದೀಪಾವಳಿ ಬಲಿಪಾಡ್ಯಮಿ ದಿನ ವಿದ್ಯುಕ್ತ ಚಾಲನೆ ಸಿಗುತ್ತದೆ.
ಹಾವೇರಿ ನಗರದ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಆಶ್ರಯದಲ್ಲಿ ದನ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತು. ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸುಮಾರು ಎರಡು ನೂರಕ್ಕೂ ಅಧಿಕ ಹೋರಿಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದವು. ನಗರದ ಹಳೆಯ ಗ್ರಂಥಾಲಯದ ಸ್ಥಳದಿಂದ ಕೊಬ್ಬರಿ ಕಟ್ಟಿದ ಹೋರಿಗಳನ್ನ ಓಡಿಸಲಾಯಿತು. ಸ್ಪರ್ಧೆಯಲ್ಲಿ ಗೇಟು ತೆರೆಯುತ್ತಿದ್ದಂತೆ ಹೋರಿಗಳ ನಾಗಾಲೋಟದಲ್ಲಿ ಓಡಿದವು. ಹೋರಿಗಳು ಓಡುತ್ತಿದ್ದಂತೆ ಹೋರಿ ಬಾವುಟಗಳು, ಹೆಸರಿನ ನಾಮಪಲಕಗಳು ಪರಸೆಯಲ್ಲಿ ರಾರಾಜಿಸಿದವು. ಕ್ಷಣ ಮಾತ್ರದಲ್ಲಿ ಮಿಂಚಿ ಮರೆಯಾಗುತ್ತಿದ್ದ ಹೋರಿಗಳನ್ನು ಹಿಡಿಯಲು ಪೈಲ್ವಾನರು ಸನ್ನದ್ದರಾಗಿ ನಿಂತಿದ್ದರು.
ರಭಸವಾಗಿ ಓಡಿ ಬರುತ್ತಿದ್ದ ಹೋರಿಗಳನ್ನು ಹಿಡಿದು ಅದರ ಮೈಮೇಲೆ ಕಟ್ಟಲಾಗಿದ್ದ ಕೊಬ್ಬರಿ ಹರಿಯಲು ಯುವಕರ ದಂಡೆ ನೆರದಿತ್ತು. ಕೆಲ ಹೋರಿಗಳ ಪೈಲ್ವಾನರ ಕೈಚಳಕಕ್ಕೆ ಸಿಕ್ಕು ಮೈಮೇಲಿನ ಕೊಬ್ಬರಿ ಹರಿಸಿಕೊಂಡವು. ಇನ್ನು ಕೆಲ ಹೋರಿಗಳು ಶರವೇಗದಲ್ಲಿ ಓಡಿ ಪೈಲ್ವಾನರ ಕೈಗೆ ಸಿಗದೇ ನಿಗದಿಪಡಿಸಿದ ಸ್ಥಳದವರೆಗೆ ಓಡಿ ಪಾಸಾದವು.
ಮನರಂಜನೆಗೆ ದನಬೆದರಿಸುವ ಸ್ಪರ್ಧೆ ಆಯೋಜನೆ:ಹಾವೇರಿ ಜಿಲ್ಲೆಯಲ್ಲಿ ದೀಪಾವಳಿಯೊಂದಿಗೆ ಕ್ರೀಡೆ ದನಬೆದರಿಸುವ ಸ್ಪರ್ಧೆ ಆರಂಭವಾಗುತ್ತದೆ. ಇದಕ್ಕೆ ಸ್ಥಳೀಯವಾಗಿ ಕೊಬ್ಬರಿ ಓಡಿಸುವ ಸ್ಪರ್ಧೆ ಹಟ್ಟಿಹಬ್ಬ ಎಂತಲೂ ಕರೆಯುವ ವಾಡಿಕೆ. ದೀಪಾವಳಿ ಬಲಿಪಾಡ್ಯಮಿ ದಿನ ಹಾವೇರಿಯಲ್ಲಿ ಯಾವುದೇ ಬಹುಮಾನಗಳಿಲ್ಲದೇ ಕೇವಲ ಮನರಂಜನೆಗೆ ದನಬೆದರಿಸುವ ಸ್ಪರ್ಧೆ ನಡೆಯಿತು. ಈ ಸ್ಫರ್ಧೆಯ ಅಖಾಡದಲ್ಲಿ ಇಳಿಯುವ ಹೋರಿಗಳಿಗೆ ರಿಹರ್ಸಲ್ ತರ ಇದ್ದು ಈ ಅಖಾಡದಲ್ಲಿ ಪ್ರಥಮ ಬಾರಿಗೆ ಓಡಿಸಲಾಗುತ್ತದೆ.