ಹಾವೇರಿ: ಜಿಲ್ಲೆಯಲ್ಲಿ ಇದುವರೆಗೂ 43 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಆದರೆ 40 ಮತ್ತು 41 ಈ ಎರಡು ಕೇಸ್‌ಗಳ ಸೋಂಕಿನ ಮೂಲ ಜಿಲ್ಲಾಡಳಿತಕ್ಕೆ ಸಿಗದಿರುವುದು ದೊಡ್ಡ ತಲೆನೋವಾಗಿದೆ.
ಸೋಂಕಿತ ಆಶಾ ಕಾರ್ಯಕರ್ತೆ ಮತ್ತು ಗರ್ಭಿಣಿಗೆ ಈ ವೈರಸ್ ಹೇಗೆ ತಗುಲಿದೆ ಎಂಬುದು ತಿಳಿದು ಬರುತ್ತಿಲ್ಲ. ಅಲ್ಲದೆ ಇವರ ಸೋಂಕಿನ ಮೂಲ ಸಿಗದಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದ್ದು, ಜಿಲ್ಲಾಡಳಿತ ಆದಷ್ಟು ಬೇಗ ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಿ ಆತಂಕ ದೂರ ಮಾಡುವಂತೆ ಆಗ್ರಹಿಸಿದ್ದಾರೆ.
ಟ್ರಾವೆಲ್ ಹಿಸ್ಟರಿ ಸಿಗದೆ ಕಂಗಾಲಾದ ಜಿಲ್ಲಾಡಳಿತ ಸವಣೂರಿನ ತವರು ಮನೆಗೆ ಹೆರಿಗೆಗೆ ಬಂದ ಗರ್ಭಿಣಿಗೆ ಕೊರೊನಾ ಬಂದಿರುವುದು ತೀವ್ರ ಆತಂಕ ಮೂಡಿಸಿದೆ. ಅಲ್ಲದೆ ಮನೆ ಮನೆಗೆ ತೆರಳಿ ಮಾಹಿತಿ ಕಲೆಹಾಕಿದ್ದ ಆಶಾ ಕಾರ್ಯಕರ್ತೆಯಲ್ಲಿ ಸಹ ಕೊರೊನಾ ಕಾಣಿಸಿಕೊಂಡಿದ್ದು, ಜಿಲ್ಲೆಯ ಜನರನ್ನು ಭಯದಲ್ಲಿರುವಂತೆ ಮಾಡಿದೆ.
43 ಪ್ರಕರಣಗಳಲ್ಲಿ ಸೋಂಕಿತರ ಟ್ರಾವೆಲ್ ಹಿಸ್ಟರಿ ಕಲೆಹಾಕಿದ್ದ ಜಿಲ್ಲಾಡಳಿತಕ್ಕೆ 40 ಮತ್ತು 41ನೇ ಪ್ರಕರಣಗಳು ತಲೆನೋವಾಗಿ ಪರಿಣಮಿಸಿವೆ. ಇವೆರಡು ಪ್ರಕರಣಗಳ ಟ್ರಾವೆಲ್ ಹಿಸ್ಟರಿ ಕಲೆಹಾಕಿ ಜಿಲ್ಲೆಯ ಜನರ ಭಯ ಹೋಗಲಾಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೊ ಪತ್ತೆಯಾದ 43 ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 25 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದಂತೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 18 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿರುವ ಎಲ್ಲಾ ಸೋಂಕಿತರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆದಷ್ಟು ಬೇಗ ಇವರೆಲ್ಲರೂ ಗುಣಮುಖರಾಗಿ ಮನೆಗೆ ತೆರಳಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದಿಂದ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಆದರೆ ಅವೆರಡು ಕೊರೊನಾ ಪ್ರಕರಣಗಳು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿವೆ.