ಹಾವೇರಿ: ಗಣೇಶೋತ್ಸವಕ್ಕೆ ಇಲ್ಲಿಯ ಉಸ್ಮಾನಸಾಬ್ ಎಂಬವರು ವಿವಿಧ ಬಗೆಯ ಏಲಕ್ಕಿ ಮಾಲೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಒಂದೆಳೆಯ ಮಾಲೆಗಳಿಂದ ಹಿಡಿದು 25 ಎಳೆಗಳಿರುವ ಮಾಲೆಗಳನ್ನು ಇವರು ತಯಾರಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿದ್ದಾರೆ. ತಾಯಿಯಿಂದ ಬಂದ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ. ವಿಶಿಷ್ಠ ಏಲಕ್ಕಿ ಮಾಲೆ ತಯಾರಿಕೆಗಾಗಿ ಇವರ ತಾಯಿಗೆ 'ಕರ್ನಾಟಕ ರಾಜ್ಯೋತ್ಸವ' ಪ್ರಶಸ್ತಿ ಲಭಿಸಿತ್ತು.
ಉಸ್ಮಾನಸಾಬ್ ಮಾತನಾಡಿ, "ಸಾರ್ವಜನಿಕ ಗಣೇಶೋತ್ಸವಗಳಿಗಾಗಿ ಮುಂಚಿತವಾಗಿ ಆರ್ಡರ್‌ಗಳು ಬಂದಿವೆ. ಈಗಾಗಲೇ ದೊಡ್ಡ ದೊಡ್ಡ ಮಾಲೆಗಳು ಸಿದ್ಧವಾಗಿವೆ. ಪ್ರತಿವರ್ಷ ಗಣೇಶ ಚತುರ್ಥಿ ಹತ್ತಿರವಾಗುತ್ತಿದ್ದಂತೆ ನಮಗೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾರದಷ್ಟು ಒತ್ತಡವಿರುತ್ತದೆ. ಈ ವರ್ಷಾರಂಭದಲ್ಲಿ ಹಾವೇರಿ ನಗರದಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅಲ್ಲಿಯೂ ಸಹ ಏಲಕ್ಕಿ ಮಾಲೆಗಳ ಕಂಪು ಹರಡಿತ್ತು. ಸಮ್ಮೇಳನಕ್ಕಿಂತಲೂ ಅಧಿಕ ವ್ಯಾಪಾರವನ್ನು ಗಣೇಶನ ಹಬ್ಬ ಮಾಡುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಗ್ರಾಹಕ ಗುರುರಾಜ್ ಮಾತನಾಡಿ, "ಉಸ್ಮಾನಸಾಬ್ ಏಲಕ್ಕಿ ಮಾಲೆಯ ಜತೆಗೆ ರುದ್ರಾಕ್ಷಿಮಾಲೆಗಳನ್ನೂ ಸಹ ಮಾರುತ್ತಾರೆ. ಒಂದು ಸಾರಿ ಜನರು ಇವರ ಅಂಗಡಿಗೆ ಬಂದರೆ ಸಾಕು ಖಾಯಂ ಆಗಿ ಗ್ರಾಹಕರಾಗುತ್ತಾರೆ. ಕಳೆದ ಹಲವು ವರ್ಷಗಳಿಂದ ಉಸ್ಮಾನಸಾಬ್ ಬಳಿ ಮಾಲೆಗಳನ್ನು ಖರೀದಿಸುತ್ತಿದ್ದೇನೆ. ಈ ಮಾಲೆಗಳ ಸೌಂದರ್ಯಕ್ಕೆ ಮನಸೋತಿದ್ದೇವೆ" ಎಂದು ತಿಳಿಸಿದರು.