ಹಾವೇರಿ:ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಮಾಲತೇಶ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ಶಸ್ತ್ರ ಪವಾಡಗಳನ್ನು ನಡೆಸಲಾಯಿತು. ಮಾಲತೇಶ ದೇವರ ಸನ್ನಿಧಾನದಲ್ಲಿ ನಡೆದ ಪವಾಡಗಳು ನೋಡುಗರನ್ನು ರೋಮಾಂಚನಗೊಳಿಸಿದವು.
ದೇವರಗುಡ್ಡದಲ್ಲಿ ಸರಪಳಿ ಪವಾಡ, ಬಗಣಿಗೂಟ ಪವಾಡಗಳು ಭಕ್ತರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದವು. ಕಾಲಲ್ಲಿ ಗೂಟ ಬಡಿದುಕೊಂಡು ಅದರಲ್ಲಿ ಹಗ್ಗ ದಾಟಿಸುವ ಮತ್ತು ಮುಳ್ಳಿನ ಗೊಂಚಲು ದಾಟಿಸುವ ಪವಾಡಗಳಂತೂ ಭಕ್ತರನ್ನ ವಿಸ್ಮಯಗೊಳಿಸಿದವು.
ದೇವರಗುಡ್ಡದಲ್ಲಿ ಪ್ರತಿವರ್ಷ ಆಯುಧ ಪೂಜೆ ದಿನದಂದು ಕಾರ್ಣಿಕೋತ್ಸವ ನಡೆದರೆ, ಮಾರನೆ ದಿನ ಪವಾಡಗಳು ನಡೆಸಲಾಗುತ್ತದೆ. ಭಕ್ತರು, ಗೊರವಪ್ಪಗಳು, ಕಂಚಾರಿವೀರರು ಸೇರಿದಂತೆ ವಿವಿಧ ಸಮುದಾಯಗಳ ಪ್ರಮುಖರು ಪವಾಡದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಧರ್ಮದರ್ಶಿಗಳು, ದೇವಸ್ಥಾನ ಮುಖ್ಯ ಅರ್ಚಕರು ಉಪಸ್ಥಿತರಿದ್ದರು. ವಿಜಯದಶಮಿ ಅಂಗವಾಗಿ ಮಾಲತೇಶ ಮತ್ತು ಗಂಗಮಾಳಮ್ಮ ದೇವಸ್ಥಾನ ಸೇರಿದಂತೆ ಸಮುಚ್ಚಯದಲ್ಲಿರುವ ದೇವಸ್ಥಾನಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಇದನ್ನೂ ಓದಿ:ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ