ಮೂಕಪ್ಪ ಶ್ರೀಗಳಿಗೆ ಶ್ರಾವಣ ಮಾಸದ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಹಾವೇರಿ:ಶ್ರಾವಣ ಮಾಸ ಪವಿತ್ರವಾದ ಮಾಸವಾಗಿದೆ. ಶ್ರಾವಣ ಮಾಸದಲ್ಲಿ ಹಲವು ಆಚರಣೆಗಳನ್ನು ಮಾಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಾಗುತ್ತದೆ. ಮನೆದೇವರು ಸೇರಿದಂತೆ ವಿವಿಧ ಮಠಗಳಿಗೆ ತೆರಳಿ ಮಠಾಧೀಶರನ್ನು ದರ್ಶಿಸಿ ಆಶೀರ್ವಾದ ಪಡೆಯಲಾಗುತ್ತದೆ. ಈ ರೀತಿ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಕೆಲವು ಭಕ್ತರು ಮಠಾಧೀಶರನ್ನು ತಮ್ಮ ಮನೆಗೆ ಕರೆಸಿಕೊಂಡು ಪಾದಪೂಜೆ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸುತ್ತಾರೆ.
ಶ್ರಾವಣ ಮಾಸದಲ್ಲಿ ಭಕ್ತರ ಮನೆಗೆ ತೆರಳುವ ಕುರಿತಂತೆ ಮಠಾಧೀಶರಿಗೆ ಸಾಕಷ್ಟು ಬೇಡಿಕೆ ಇರುತ್ತದೆ. ಇದಕ್ಕಾಗಿ ಮಠಾಧೀಶರು ಪ್ರತ್ಯೇಕವಾದ ದಿನಚರಿ ನಿರ್ವಹಣೆ ಮಾಡುತ್ತಾರೆ. ಭಕ್ತರಿಂದ ಸಾಕಷ್ಟು ಬೇಡಿಕೆ ಇರುವ ಕಾರಣ ಮುಂಗಡವಾಗಿ ದಿನಾಂಕಗಳನ್ನ ನಿಗದಿ ಮಾಡಲಾಗುತ್ತದೆ. ಈ ರೀತಿಯ ಒತ್ತಡಕ್ಕೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರ ಮೂಕಪ್ಪ ಶ್ರೀಗಳು ಹೊರತಾಗಿಲ್ಲ. ಗುಡ್ಡದಮಲ್ಲಾಪುರದ ವೃಷಭರೂಪಿ ಸ್ವಾಮೀಜಿಗಳಂತೂ ಶ್ರಾವಣ ಮಾಸದಲ್ಲಿ ಭಕ್ತರ ಮನೆ ಮನೆಗೆ ತೆರಳಿ ದರ್ಶನ ನೀಡುತ್ತಾರೆ.
ಇದಕ್ಕಾಗಿ ಶ್ರೀಗಳಿಗೆ ವಿಶೇಷವಾದ ವಾಹನವನ್ನು ಸಿದ್ಧಪಡಿಸಲಾಗಿದ್ದು, ಈ ವಾಹನದ ಮೂಲಕ ಭಕ್ತರ ಮನೆ ಮನೆಗೆ ತೆರಳುವ ಶ್ರೀಗಳು ಭಕ್ತರಿಂದ ಪೂಜೆ ಸ್ವೀಕರಿಸುತ್ತಾರೆ. ಹಾವೇರಿ ಸಮೀಪದ ನಾಗನೂರು ಗ್ರಾಮಕ್ಕೆ ಮೂಕಪ್ಪ ಶ್ರೀಗಳು ಆಗಮಿಸಿದ್ದರು, ಮೂಕಪ್ಪ ಶ್ರೀಗಳಿಗಾಗಿ ಸಿದ್ಧಪಡಿಸಲಾಗಿದ್ದ ವಿಶೇಷವಾದ ಗದ್ದುಗೆ ಮೇಲೆ ಕುಳಿತ ಹಿರಿಯ ಮತ್ತು ಕಿರಿಯ ಶ್ರೀಗಳು ಭಕ್ತರ ಪೂಜೆ ಸ್ವೀಕರಿಸಿದರು. ಮುಂಜಾನೆಯಿಂದ ಆರಂಭವಾದ ಪೂಜಾ ಕೈಂಕರ್ಯಗಳು ಮಧ್ಯಾನ್ನದವರೆಗೆ ನಡೆದವು.
ಲಿಂಗಪೂಜೆ ನೆರವೇರಿಸಿ ಮಹಾರುದ್ರಾಭಿಷೇಕ ಸೇರಿದಂತೆ ವಿವಿಧ ಅಭಿಷೇಕ ಸಲ್ಲಿಸಲಾಯಿತು. ಸುಮಾರು ಮೂರು ಗಂಟೆ ನಡೆದ ಪೂಜೆಯಲ್ಲಿ ಜಂಗಮ ಸ್ವರೂಪಿ ವೃಷಭರೂಪಿಗಳು ಕುಳಿತಕೊಂಡು ಭಕ್ತರಿಗೆ ಆಶೀರ್ವಾದ ನೀಡಿದರು. ಗ್ರಾಮದ ಭಕ್ತರು ಹಿರಿಯ ಮತ್ತು ಕಿರಿಯ ಶ್ರೀಗಳಿಗೆ ಹಣ್ಣು ಕಾಯಿ ನೈವೇದ್ಯ ಸಲ್ಲಿಸಿದರು. ಶ್ರೀಗಳ ಪಾದಪೂಜೆ ನೆರವೇರಿಸಿ ನಂತರ ಕರ್ಣಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.
ಈ ಬಗ್ಗೆ ಮಠದ ಶ್ರೀಗಳ ಸಂಚಾರಿ ಉಸ್ತುವಾರಿ ವೀರೇಶ ಹಿರೇಮಠ ಮಾತನಾಡಿ, ವೃಷಭರೂಪಿ ಮೂಕಪ್ಪ ಶ್ರೀಗಳು ಮಠದಲ್ಲಿ ಕೇವಲ ಅಮವಾಸ್ಯೆಯ ದಿನ ಮಾತ್ರ ಭಕ್ತರಿಗೆ ಸಿಗುತ್ತಾರೆ. ಉಳಿದಂತೆ ಹಾವೇರಿ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಭಕ್ತರ ಮನೆಗೆ ತೆರಳಿ ವಿಶೇಷ ದರ್ಶನ ನೀಡುತ್ತಾರೆ. ಮೂರುಹೊತ್ತು ಲಿಂಗಪೂಜೆ ಸಲ್ಲಿಸಲಾಗುತ್ತದೆ. ಅದರಲ್ಲೂ ಶ್ರಾವಣ ಮಾಸದಲ್ಲಿ ಭಕ್ತರು ಹೆಚ್ಚಾಗಿ ಮೂಕಪ್ಪ ಶ್ರೀಗಳನ್ನು ಮನೆಗೆ ಆಹ್ವಾನಿಸುತ್ತಾರೆ. ಈ ರೀತಿ ಶ್ರಾವಣ ಮಾಸದಲ್ಲಿ ಭಕ್ತರ ಬೇಡಿಕೆ ಅಧಿಕವಾಗಿರುತ್ತದೆ. ಈ ದಿನಗಳಂದು ಮೂಕಪ್ಪ ಶ್ರೀಗಳ ಅವರ ಲಭ್ಯತೆಯನ್ನು ಹೊಂದಿಸುವುದೇ ಕಷ್ಟಕರ ಎಂದರು.
ಮೂಕಪ್ಪ ಶ್ರೀಗಳ ಭಕ್ತ ಮಹೇಶ್ ಮಾತನಾಡಿ, ನಾವು ಕಳೆದ ಹಲವು ವರ್ಷಗಳಿಂದ ಮೂಕಪ್ಪ ಶ್ರೀಗಳಿಗೆ ಪೂಜೆ ಸಲ್ಲಿಸುತ್ತಿದ್ದೇವೆ. ಮಠಕ್ಕೆ ಹೋಗಿ ಮೂಕಪ್ಪ ಶ್ರೀಗಳ ದರ್ಶನ ಪಡೆಯುತ್ತೇವೆ. ಶ್ರಾವಣ ಮಾಸದಲ್ಲಿ ಮನೆಗೆ ಆಹ್ವಾನಿಸಿ ಮನೆಯಲ್ಲಿ ಸ್ವಾಮೀಜಿಗಳಿಗೆ ಪಾದಪೂಜೆ ಸೇರಿದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತೇವೆ. ಈ ರೀತಿ ಮಾಡುವದರಿಂದ ನಮ್ಮ ಇಷ್ಟಾರ್ಥಗಳನ್ನು ಮೂಕಪ್ಪ ಶ್ರೀಗಳು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಇದನ್ನೂ ಓದಿ:ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಮಂಗಳೂರಿನಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ