ಹಾವೇರಿ : ಒಂದು ಕಾಲದಲ್ಲಿ ಗಣೇಶ ಹಬ್ಬ ಬಂದರೆ ಸಾಕು ಹಲವು ಪ್ರಾತ್ಯಕ್ಷಿಕೆಗಳನ್ನ ಸಾರ್ವಜನಿಕ ಗಣೇಶ ಸಮಿತಿಗಳು ಏರ್ಪಡಿಸುತ್ತಿದ್ದವು. ಪೌರಾಣಿಕ ಕಥೆಗಳು, ಸತ್ಯಹರಿಶ್ಚಂದ್ರ, ಮಹಾಭಾರತ, ರಾಮಾಯಣ ಸನ್ನಿವೇಶಗಳನ್ನ ಗಜಾನನ ಸಮಿತಿಗಳು ಏರ್ಪಡಿಸುವ ಮೂಲಕ ಭಕ್ತರಿಗೆ ಪೌರಾಣಿಕ ಕಥನಗಳನ್ನ ಕಣ್ಣುಮುಂದೆ ಸೃಷ್ಠಿಸುತ್ತಿದ್ದವು. ಉತ್ತರಕರ್ನಾಟದಲ್ಲಿ ಬೆಳಗಾವಿ ಮತ್ತು ಹುಬ್ಬಳ್ಳಿ ನಗರಗಳಲ್ಲಿ ಪೂರ್ತಿರಾತ್ರಿ ಈ ರೀತಿಯ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು. ಭಕ್ತರು ರಾತ್ರಿಪೂರ್ತಿ ಈ ರೀತಿಯ ಪ್ರದರ್ಶನಗಳನ್ನ ವೀಕ್ಷಿಸುತ್ತಿದ್ದರು. ಆದರೆ ಟಿವಿ ಮೊಬೈಲ್ ಬಂದ ನಂತರ ಈ ರೀತಿಯ ಪ್ರದರ್ಶನಗಳ ಸಂಖ್ಯೆ ಕಡಿಮೆಯಾದವು. ಅದರಲ್ಲೂ ಕೊರೊನಾ ಬಂದ ನಂತರವಂತೂ ಈ ರೀತಿಯ ಪ್ರದರ್ಶನಗಳ ಸಂಖ್ಯೆ ಮತ್ತಷ್ಟು ಕ್ಷೀಣಿಸಿತು. ಈ ರೀತಿಯ ಪ್ರದರ್ಶನಕ್ಕೆ ಗಣೇಶ ಸಮಿತಿಗಳು ಮತ್ತೆ ಮುಂದಾಗುತ್ತಿವೆ.
ಹಾವೇರಿಯ ಸಿದ್ದದೇವಪುರದ ಗಜಾನನ ಸಮಿತಿ ಇದೀಗ ಗಣೇಶ ದರ್ಶನದ ಜೊತೆಗೆ ಇಸ್ರೋ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಪ್ರಾತ್ಯಕ್ಷಿಕೆಯ ಪ್ರದರ್ಶನ ಏರ್ಪಡಿಸಿದೆ. ಸಂಜೆ ಆರುಗಂಟೆಯಿಂದ ಆರಂಭವಾಗುವ ಈ ಪ್ರದರ್ಶನಗಳು ರಾತ್ರಿ 9-30 ರವರಗೆ ನಡೆಯುತ್ತವೆ. ಇದ್ದಕ್ಕಿದ್ದಂತೆಯೇ ಇಸ್ರೋ ಚಂದ್ರಯಾನ 03 ರಾಕೆಟ್ ಉಡಾವಣೆಯ ಕೌಂಟ್ಡೌನ್ ಆರಂಭವಾಗುತ್ತದೆ. ಕೌಂಟ್ಡೌನ್ ಮುಗಿಯುತ್ತಿದ್ದಂತೆ ಪಿಎಸ್ಎಲ್‌ವಿ ರಾಕೆಟ್ ಉಡಾವಣೆಯಾಗುತ್ತದೆ.
ಮೇಲೆ ಮೇಲಕ್ಕೆ ಏರುತ್ತಿದ್ದಂತೆ ಪ್ರೇಕ್ಷಕರ ಕರತಾಡನ ಸದ್ದು ಕೇಳಲಾರಂಭಿಸುತ್ತದೆ. ರಾಕೆಟ್‌ನಿಂದ ಬೇರ್ಪಡುವ ನೌಕೆ ಚಂದ್ರನ ಸುತ್ತ ಪ್ರದಕ್ಷಿಣಿ ಹಾಕುತ್ತದೆ. ನಂತರ ನೌಕೆಯಿಂದ ತ್ರಿವಿಕ್ರಮ ಹೊರಗೆ ಬರುತ್ತಿದ್ದಂತೆ ಭಕ್ತರು ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮಿಸುತ್ತಾರೆ. ತ್ರಿವಿಕ್ರಮ ಹೊರಗೆ ಬರುತ್ತಿದ್ದಂತೆ ತಿರಂಗ ಹಾರಿಸುವ ಮೂಲಕ ಇಸ್ರೋ ಕಾರ್ಯಕ್ಕೆ ಸಲಾಂ ಅರ್ಪಣೆ ಮಾಡಲಾಗುತ್ತದೆ. ನಂತರ ಗುಡುಗು ಸಿಡಿಲು ಆರ್ಭಟದೊಂದಿಗೆ ಗಣೇಶನ ಮೂರ್ತಿಯನ್ನ ತೋರಿಸಲಾಗುತ್ತದೆ. ಗಣೇಶ ದರ್ಶನ ಪಡೆಯುವ ಭಕ್ತರು ಭಾರತ ಮಾತಾಕಿ ಜೈ ಎಂದು ಘೋಷಣೆ ಹಾಕುತ್ತಾರೆ.