ಹಾವೇರಿ : ಇಲ್ಲಿನ ವರದಾ ನದಿ ದಡದಲ್ಲಿ ಜಿಂಕೆಯ ಕಳೇಬರ ಮತ್ತು ನವಿಲಿನ ರೆಕ್ಕೆಪುಕ್ಕಗಳು ಪತ್ತೆಯಾಗಿದ್ದು, ಗ್ರಾಮಸ್ಥರು ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದ ಬಳಿ ಇರುವ ವರದಾ ನದಿಯ ದಡದಲ್ಲಿ ಅರ್ಧ ತಿಂದು ಬಿಟ್ಟಿರುವ ರೀತಿಯಲ್ಲಿ ಜಿಂಕೆಯ ಕಳೇಬರ ಮತ್ತು ನವಿಲಿನ ರೆಕ್ಕೆಪುಕ್ಕಗಳು ಪತ್ತೆಯಾಗಿವೆ.
ಅಲ್ಲದೇ ಸ್ಥಳದಲ್ಲಿ ಚಿರತೆಯನ್ನು ಹೋಲುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇದನ್ನು ಕಂಡ ರೈತರು ಚಿರತೆ ದಾಳಿ ನಡೆಸಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ನರೇಗಲ್ ಗ್ರಾಮದ ಬಳಿ ಇರುವ ವರದಾ ನದಿ ದಂಡೆಯಲ್ಲಿ ರೈತರು ಕೃಷಿ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ರೈತರು ಜಮೀನಿಗೆ ನೀರು ಹಾಯಿಸಲು ಹೋಗುತ್ತಾರೆ. ಇದೀಗ ಜಿಂಕೆ ಕಳೇಬರ ಕಂಡಿರುವ ರೈತರು ಗ್ರಾಮದಲ್ಲಿ ಚಿರತೆ ಓಡಾಡುತ್ತಿದೆ ಎಂದು ಆತಂಕಗೊಂಡಿದ್ದಾರೆ. ಇದರಿಂದ ಜಮೀನಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಮತ್ತು ನವಿಲಿನ ಸಾವಿನ ಕಾರಣ ಪತ್ತೆ ಹಚ್ಚಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಚಿರತೆ ಇದ್ದರೆ ಸೆರೆ ಕಾರ್ಯಾಚರಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಚಾಮರಾಜನಗರದಲ್ಲಿ ಬಾಲಕಿ ಮೇಲೆ ಚಿರತೆ ದಾಳಿ: ಕಳೆದ ಕೆಲವು ದಿನಗಳ ಹಿಂದೆ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಚಿರತೆಯೊಂದು ದಾಳಿ ನಡೆಸಿರುವ ಘಟನೆ ಚಾಮರಾಜನಗರದ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ನಡೆದಿತ್ತು. ಚಿರತೆ ದಾಳಿಯಿಂದಾಗಿ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಸುಶೀಲಾ (6) ಚಿರತೆ ದಾಳಿಗೊಳಗಾದ ಬಾಲಕಿ.