ಹಾವೇರಿ :ನಗರದಲ್ಲಿ ನಾಳೆ ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು, ಆ ವೇಳೆ ಕಪ್ಪು ಬಾವುಟ ಪ್ರದರ್ಶಿಸಲು ಬಿಜೆಪಿ ಶಾಸಕರೇ ಆಗಿರುವ ನೆಹರು ಓಲೇಕಾರ್ ಮತ್ತು ಅವರ ಬೆಂಬಲಿಗರು ನಿರ್ಧರಿಸಿದ್ದಾರೆ. ವಕೀಲರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡದ್ದಕ್ಕೆ ಶಾಸಕ ನೆಹರು ಓಲೇಕಾರ್ ಮತ್ತು ಬೆಂಬಲಿಗರು ಗರಂ ಆಗಿದ್ದಾರೆ.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆಯಲಿರುವ ವಕೀಲರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ತಾವು ಶಾಸಕರಾಗಿದ್ದಾಗ ವಕೀಲರ ಸಂಘದ ಕಟ್ಟಡಕ್ಕೆ ಅನುದಾನ ಕೊಡಿಸಿದ್ದೇವೆ ಎಂದರು. ಆದರೂ ಸಹ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ತಮ್ಮನ್ನೇ ಕಡೆಗಣಿಸಿರುವುದಕ್ಕೆ ಶಾಸಕ ಓಲೇಕಾರ್ ಗರಂ ಆಗಿದ್ದಾರೆ. ಸರ್ಕಾರದ ಜಾಗ ಮತ್ತು ಸರ್ಕಾರದ ಹಣದಲ್ಲಿ ನಿರ್ಮಾಣ ಆಗಿರುವ ವಕೀಲರ ಸಂಘದ ಕಟ್ಟಡ ಉದ್ಘಾಟನೆ ವೇಳೆ ನೆಹರು ಓಲೇಕಾರ್ ಅಭಿಮಾನಿಗಳು ಬೆಂಬಲಿಗರು ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಈ ಬಗ್ಗೆ ಮಾಧ್ಯಮಗೋಷ್ಟಿ ಮಾತನಾಡಿದ ಸ್ಥಳೀಯ ಶಾಸಕ ಓಲೇಕಾರ್, ಸ್ಥಳೀಯ ಶಾಸಕರನ್ನು ಕಡೆಗಣಿಸಿರುವುದು ದುರಂತದ ಸಂಗತಿ. ಸುಮಾರು ವರ್ಷಗಳಿಂದ ಕೋರ್ಟ್ ಸಂಕೀರ್ಣದ ಜಗಳವಿತ್ತು. ದಿವಂಗತ ಸಿ.ಎಂ. ಉದಾಸಿಯವರು ಸಚಿವರಾಗಿದ್ದಾಗ ಅದನ್ನು ಸರಿಪಡಿಸಿ ಸಂಕೀರ್ಣ ನಿರ್ಮಿಸಲಾಗಿತ್ತು. ವಕೀಲರ ಸಂಘದ ಕಟ್ಟಡ ನಿರ್ಮಾಣಕ್ಕೆ ಏಳೂವರೆ ಕೋಟಿ ರೂಪಾಯಿ ಕೊಡಿಸಿದ್ದೆ ಎಂದು ಹೇಳಿದ್ದಾರೆ.