ಹಾವೇರಿ: ಅರುಣಾ ಕುಮಾರಿ ಮತ್ತು ಇಂದ್ರಜಿತ್ ಪ್ರಕರಣಗಳಿಂದ ಬೇಸತ್ತ ನಟ ದರ್ಶನ್ ಎರಡು ದಿನಗಳ ಕಾಲ ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ವಿಶ್ರಾಂತಿ ಪಡೆದು ವಾಪಸ್ ತೆರಳಿದ್ದಾರೆ. ಸೋಮವಾರ ಬ್ಯಾಡಗಿಗೆ ಆಗಮಿಸಿದ್ದ ನಟ ದರ್ಶನ್ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಹಾವೇರಿಯಲ್ಲಿ ಮೂರು ದಿನ ವಿಶ್ರಾಂತಿ ಪಡೆದ ದರ್ಶನ.. ನೆಚ್ಚಿನ ನಟನ ನೋಡಲು ಮುಗಿ ಬಿದ್ದ ಫ್ಯಾನ್ಸ್, ಲಾಠಿ ರುಚಿ - ಪೊಲೀಸರು ಲಘು ಲಾಠಿ ಪ್ರಹಾರ
ಇಂದ್ರಜಿತ್ ಲಂಕೇಶ್ ಹಾಗೂ ದರ್ಶನ್ ನಡುವೆ ವಾಕ್ಸಮರ ಏರ್ಪಟ್ಟು ಇದೀಗ ತಣ್ಣಗಾಗಿದೆ. ಈ ಹಿನ್ನೆಲೆ ದರ್ಶನ್ ಮೂರು ದಿನಗಳ ಕಾಲ ಹಾವೇರಿಯಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆದು ಬೆಂಗಳೂರಿಗೆ ಮರಳಿದ್ದಾರೆ.
3ನೇ ದಿನವಾದ ಇಂದು ನಟ ದರ್ಶನ್ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ಮನೆಯಲ್ಲಿ ಉಪಹಾರ ಸೇವಿಸಿದರು. ಈ ವೇಳೆ ಮಾಜಿ ಶಾಸಕ ಸುರೇಶಗೌಡ ಮತ್ತು ಕುಟುಂಬಸ್ಥರು ನಟ ದರ್ಶನ್ಗೆ ಮೈಸೂರು ಪೇಟ ತೊಡಿಸಿ ಗೌರವಿಸಿದರು. ಈ ನಡುವೆ ಹಾವೇರಿಗೆ ದರ್ಶನ್ ಆಗಮಿಸಿರುವ ಕುರಿತು ಅಭಿಮಾನಿಗಳಿಗೆ ತಿಳಿಯುತ್ತಿದ್ದಂತೆ ವಿಶ್ರಾಂತಿ ಗೃಹದ ಸುತ್ತ ನೂರಾರು ಅಭಿಮಾನಿಗಳು ನೆರೆದಿದ್ದರು. ನೆಚ್ಚಿನ ನಟ ದರ್ಶನ್ ನೋಡಲು ರಸ್ತೆ ತುಂಬೆಲ್ಲ ಮುಗಿಬಿದ್ದಿದ್ದರು.
ಈ ಹಿನ್ನೆಲೆ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಅಭಿಮಾನಿಗಳನ್ನು ದೂರ ಸರಿಸಿದರು. ಈ ಕುರಿತು ಮಾತನಾಡಿದ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್ ದರ್ಶನ್ ವಿಶ್ರಾಂತಿಗಾಗಿ ನಮ್ಮ ಅತಿಥಿಯಾಗಿ ಬಂದಿದ್ದರು. ಮೈಸೂರು ಮತ್ತು ಬೆಂಗಳೂರು ಕಡೆ ತೊಂದರೆಯಾಗಬಹುದು ಎಂದು ನಮ್ಮ ಅತಿಥಿಗೃಹಕ್ಕೆ ಆಗಮಿಸಿದ್ದರು. ಸೋಮವಾರ ಆಗಮಿಸಿದ ದರ್ಶನ್ ಬುಧವಾರ ಮನೆಯಲ್ಲಿ ಉಪಹಾರ ಸೇವಿಸಿ ಬೆಂಗಳೂರಿಗೆ ತೆರಳಿದ್ದಾರೆ ಎಂದಿದ್ದಾರೆ.