ಹಾವೇರಿ:ಕಾಂಗ್ರೆಸ್‌ನಿಂದ ಬಿಜೆಪಿ ಸೇರಲು ಸುಮಾರು ಜನ ತುದಿಗಾಲಲ್ಲಿದ್ದಾರೆ. ಆದರೆ, ನಾವು ಸೆಲೆಕ್ಟ ಮಾಡಿ ಯಾರನ್ನ ತಗೋಬೇಕು ಯಾರನ್ನ ತಗೋಬಾರದು ಎಂದು ವಿಚಾರ ಮಾಡಿ ತಗೋತಿವಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ. ಜಿಲ್ಲೆಯ ರಾಣೆಬೆನ್ನೂರಿನ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಗುಜರಾತ್‌ನಲ್ಲಿ ಕಳೆದ ಎಲೆಕ್ಷನ್ನಲ್ಲಿ 77 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು. ಈಗ ಅದು 17ಕ್ಕೆ ಬಂದಿದೆ. ಅಂದರೆ ಅವರು 60 ಸ್ಥಾನ ಕಳೆದುಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಕೇವಲ ಎರಡೇ ಎರಡು ಸೀಟುಗಳನ್ನು ಪಡೆದಿದೆ. ಹೀಗಿರುವಾಗ ಯಾರು ಹೋಗ್ತಾರೆ ಮುಳುಗುತ್ತಿರುವ ಹಡಗಿಗೆ. ರಾಜ್ಯದಲ್ಲಿ ಸಹ ಇದೇ ಪರಿಸ್ಥಿತಿ ಇದೆ. ಸ್ವಲ್ಪ ದಿನಗಳಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಮಹಾಭಾರತ ನಡೆಯುತ್ತದೆ ಎಂದು ಸಿಟಿ ರವಿ ಭವಿಷ್ಯ ನುಡಿದರು.
ಪ್ರಜಾಧ್ವನಿ ಅಲ್ಲಾ ಕಾಂಗ್ರೆಸ್ ಧ್ವನಿ:ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ ಬಗ್ಗೆ ಮಾತನಾಡಿದ ಅವರು, ಪ್ರಜಾಧ್ವನಿ ಎಂದರೆ ಜನರು ಮಾತನಾಡಬೇಕು. ಅದು ಪ್ರಜಾಧ್ವನಿ ಅಲ್ಲ ಕಾಂಗ್ರೆಸ್ ಧ್ವನಿ. ಕಾಂಗ್ರೆಸ್‌ನವರು ಇರುವುದೇ ನಮ್ಮನ್ನ ಬೈಯ್ಯೂಕೆ ಎಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಪುರಂದರದಾಸರು ನಿಂದಕರು ಇರಬೇಕು ಜಗದೊಳಗೆ ಎಂದು ಹೇಳಿದ್ದಾರೆ ಎಂದು ಉದಾಹರಣೆಯನ್ನೂ ಕೊಟ್ಟರು. ಕಾಂಗ್ರೆಸ್ನವರ ಮಾತಿನಲ್ಲಿ ನಮ್ಮ ಬಗ್ಗೆ ಭಯ ವ್ಯಕ್ತವಾಗುತ್ತಿದೆ. ಪ್ರಜೆಗಳು ನಮ್ಮ ಜೊತೆ ಇದ್ದಾರೆ. ಪ್ರಜೆಗಳನ್ನು ಲೂಟಿ ಮಾಡಿದ ಕಾಂಗ್ರೆಸ್ಸಿಗರು ನಮ್ಮ ವಿರುದ್ದ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅವರದು ಬರೀ ಸೌಂಡ್ ನಮ್ಮದು ಗ್ರೌಂಡ್. ಪ್ರತಿದಿನ ಗ್ರೌಂಡ್ ಅಲ್ಲಿ ನಮ್ಮ ಕೆಲಸ ಆಗುತ್ತಿವೆ. ಅವರು ಮೈಕ್ ಹಚ್ಚಿಕೊಂಡು ನಮಗೆ ಬೈಯ್ದರೆ ವೋಟ್ ಬರುತ್ತವಾ.? ಕಾಂಗ್ರೆಸ್‌ನವರು ಸೌಂಡ್ ಹೆಚ್ಚಿಗೆ ಮಾಡುತ್ತಾರೆ. ಪ್ರತಿಪಕ್ಷನಾಯಕ ಸಿದ್ದರಾಮಯ್ಯ 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅಪ್ಪನಾಣೆಗೂ ಪ್ರಧಾನಿಯಾಗಲ್ಲ ಎಂದು ಹೇಳಿದ್ದರು. ಮೋದಿಯವರು ಎರಡು ಬಾರಿ ಪ್ರಧಾನಿಯಾದರು ಈಗ ಅಪ್ಪನ ಬಗ್ಗೆ ನಾನು ಏನು ಹೇಳಲಿ. 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಒಂದೇ ಒಂದು ಸೀಟ್ ಬರುವುದಿಲ್ಲಾ ಎಂದಿದ್ದರು. ನಾವು ಜೆಡಿಎಸ್ ಒಗ್ಗಟ್ಟಾಗಿದ್ದೇವೆ ಎಲ್ಲಾ ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದರು ಆದರೆ ಏನಾಯಿತು, ನಾವು ಇನ್ನು ಸ್ವಲ್ಪ ಪ್ರಯತ್ನಿಸಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ಗೆ ಒಂದು ಸೀಟು ಬರುತ್ತಿರಲಿಲ್ಲ ಎಂದು ಹೇಳಿದರು.