ಹಾವೇರಿ : ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಇಲ್ಲಿನ ವರದಾ, ತುಂಗಭದ್ರಾ, ಧರ್ಮಾ ಮತ್ತು ಕುಮದ್ವತಿ ನದಿಗಳು ಮೈದುಂಬಿ ಹರಿಯುತ್ತಿವೆ. ನದಿಗಳ ಜಲಾನಯನ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ಇಲ್ಲಿನ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಇಲ್ಲಿನ ಬಹುತೇಕ ಕೆರೆಗಳು ತುಂಬಿ ಕೆಲ ಕೆರೆಗಳ ಕೋಡಿ ಒಡೆದು ರೈತರ ಜಮೀನಿಗೆ ನೀರು ನುಗ್ಗಿದೆ.
ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕುಡುಪಲಿ ಮತ್ತು ಬಡಸಂಗಾಪುರ ನಡುವಿನ ಬ್ಯಾರೇಜ್ ಮುಳುಗಡೆಯಾಗಿದ್ದು ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸವಣೂರು ತಾಲೂಕಿನ ಹಲಸೂರು,ಕುಣಿಮೆಳ್ಳಹಳ್ಳಿ, ಹಾನಗಲ್ ತಾಲೂಕಿನ ಕೂಡಲ ಹರವಿ, ರಟ್ಟಿಹಳ್ಳಿ ತಾಲೂಕಿನ ಕುಡುಪಲಿ ಎಲಿವಾಳ, ಹಾವೇರಿ ತಾಲೂಕಿನ ಅಕ್ಕೂರು, ಮಣ್ಣೂರು, ಹಾಲಗಿ, ಮರೋಳ ಸೇರಿದಂತೆ ಹಲವು ಗ್ರಾಮಗಳ ರೈತರ ಜಮೀನುಗಳು ಜಲಾವೃತಗೊಂಡಿವೆ. ರೈತರ ಜಮೀನಿನಲ್ಲಿದ್ದ ಕ್ಯಾಬೇಜ್,ಮೆಕ್ಕೆಜೋಳ,ಸೋಯಾಬಿನ್ ,ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಜಲಾವೃತಗೊಂಡಿದೆ.
ಬ್ಯಾಡಗಿ ತಾಲೂಕಿನ ಕಾಗಿನೆಲೆ ಕೆರೆ ಕೋಡಿ ಬಿದ್ದಿದ್ದು ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ಜಲಾವೃತಗೊಂಡಿದೆ. ಕೋಡಿಯಿಂದ ಬೆನಕನಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು, ಸಾಲಸೋಲ ಮಾಡಿ ಬೆಳೆದಿದ್ದ ಬೆಳೆಗಳು ಜಲಾವೃತಗೊಂಡಿದ್ದು ರೈತರನ್ನು ಆತಂಕಕ್ಕೀಡುಮಾಡಿದೆ.