ಹಾವೇರಿ:ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ರೈತರು ಮಳೆ, ಮಳೆ ಎಂದು ಗಗನದೆಡೆ ಮುಖ ಮಾಡಿದ್ದಾರೆ. ಆದರೆ ಮಳೆರಾಯನ ಮುನಿಸು ಮಾತ್ರ ಕಡಿಮೆಯಾಗಿಲ್ಲ. ಆದರೆ ಇಲ್ಲೊಬ್ಬ ರೈತ ಜಮೀನಿನಲ್ಲಿದ್ದ ನೀರನ್ನು ಬೇರೆಡೆ ಸಾಗಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ದ್ಯಾಮಪ್ಪ ತಿಮ್ಮಪ್ಪ ಐಗಳ ಅವರ ಅಳಲು ಇದು.
ಈ ರೈತ ಸುಮಾರು 9 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಬೆಳೆ ಚೆನ್ನಾಗಿ ಬಂದಿದೆ. ಮೆಕ್ಕೆಜೋಳ ತೆನೆ ಬಿಡುವ ವೇಳೆಗೆ ಪಕ್ಕದಲ್ಲಿನ ತುಂಗಾ ಮೇಲ್ದಂಡೆ ಕಾಲುವೆಯಿಂದ ಇತನ ಜಮೀನಿಗೆ ನೀರು ಬರಲಾರಂಭಿಸಿದೆ. ಪರಿಣಾಮ ತೆನೆಗಳು ಜೊಳ್ಳುಜೊಳ್ಳಾಗಿವೆ. 9 ಎಕರೆ ಜಮೀನಿನಲ್ಲಿ ನೀರು ನಿಂತಿದ್ದು ಗೋವಿನಜೋಳದ ರವದಿ ಕೊಳೆಯಲಾರಂಭಿಸಿದೆ.
ಎಕರೆಗೆ 40 ಸಾವಿರ ರೂಪಾಯಿ ಖರ್ಚು ಮಾಡಿ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತಿದ್ದೆ. ಬೆಳೆ ಚೆನ್ನಾಗಿ ಬಂದಿತ್ತು. ಒಳ್ಳೆಯ ಸಮಯಕ್ಕೆ ತೆನೆಯೂ ಒಡೆಯಲಾರಂಭಿಸಿತ್ತು. ಅಷ್ಟರಲ್ಲಿ ಪಕ್ಕದಲ್ಲಿ ಹಾದುಹೋಗಿರುವ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯಲ್ಲಿ ಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದಾರೆ. ಇದರಿಂದ ತಗ್ಗಿನ ದ್ಯಾಮಪ್ಪ ಅವರ ಜಮೀನು ನೀರಿನಲ್ಲಿ ನಿಂತಿದೆ.