ತಾಲೂಕು ರೈತ ಸಂಘದ ಅಧ್ಯಕ್ಷ ಶಂಕರಗೌಡ ಶಿರಗಂಬಿ ಅವರು ಮೊಸಳೆ ಕಾಟದ ಬಗ್ಗೆ ಪ್ರತಿಕ್ರಿಯಿಸಿದರು ಹಾವೇರಿ: ಮಾನವ ಮತ್ತು ಪ್ರಾಣಿಗಳ ಸಂಘರ್ಷ ಮುಂದುವರಿದಿದೆ. ಮನುಷ್ಯನ ದುರಾಸೆಯಿಂದ ಕಾಡಿನಲ್ಲಿರಬೇಕಾದ ಪ್ರಾಣಿಗಳು ನಾಡಿನ ಮೇಲೆ ದಾಳಿ ನಡೆಸಲಾರಂಭಿಸಿವೆ. ಗ್ರಾಮಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಆನೆ ಮತ್ತು ಮನುಷ್ಯರ ಸಂಘರ್ಷ ಮುಂದುವರೆದಿದೆ. ಕೆಲವು ಕಡೆ ಚಿರತೆ ಸೇರಿದಂತೆ ವಿವಿಧ ಪ್ರಾಣಿಗಳು ಮತ್ತು ಮಾನವನ ನಡುವೆ ಸಂಘರ್ಷ ಮುಂದುವರೆದಿದೆ. ಈ ಸಂಘರ್ಷದಲ್ಲಿ ದಿನನಿತ್ಯ ಹಲವು ಪ್ರಾಣಿಗಳು ಸಾವನ್ನಪ್ಪುತ್ತಿದ್ದಾರೆ. ಇನ್ನು ಕೆಲವೆಡೆ ಅಮಾಯಕ ಜನ ಬಲಿಯಾಗಿದ್ದಾರೆ.
ಮಾನವ ಮತ್ತು ಪ್ರಾಣಿ ಸಂಘರ್ಷ ಪ್ರಸ್ತುತ ಜ್ವಲಂತ ಸಮಸ್ಯೆಯಾಗಿದ್ದು, ಸರ್ಕಾರಗಳು ಸಂಘರ್ಷ ನಿವಾರಣೆಗೆ ಹಲವು ಕ್ರಮ ಕೈಗೊಂಡಿದ್ದರೂ ಸಂಘರ್ಷ ಕಡಿಮೆಯಾಗುತ್ತಿಲ್ಲ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಬಡಸಂಗಾಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇದೀಗ ಮೊಸಳೆ ಕಾಟ ಶುರುವಾಗಿದೆ. ಗ್ರಾಮದ ಸಮೀಪ ಹರಿದುಹೋಗಿರುವ ಕುಮದ್ವತಿ ನದಿಯಲ್ಲಿ ಬೃಹದಾಕಾರದ ಮೊಸಳೆ ಪತ್ತೆಯಾಗಿದ್ದು, ಜನರ ನಿದ್ದೆಗೆಡಿಸಿದೆ.
ರೈತರು ಜಮೀನುಗಳಿಗೆ ಬರುವುದನ್ನೇ ಬಿಟ್ಟಿದ್ದಾರೆ: 'ಈ ಮೊಸಳೆಯಿಂದಾಗಿ ಬಡಸಂಗಾಪುರ, ಕುಡುಪಲಿ, ಯಡಗೋಡ, ಹಿರೇಮಾದಾಪುರ ಹಾಗೂ ಸಣ್ಣಗುಬ್ಬಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮೊಸಳೆ ಕಾಣಿಸಿಕೊಂಡು ಹಲವು ದಿನಗಳಾಗಿವೆ. ಅರಣ್ಯ ಇಲಾಖೆ ಎಚ್ಚರಿಕೆ ಫಲಕ ಹಾಕಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ ಎಂಬ ಆರೋಪ ಇಲ್ಲಿನ ಜನರದ್ದಾಗಿದೆ. ಈ ಮೊಸಳೆ ಬಡಸಂಗಾಪುರದ ಬಂದಾರದಿಂದ ಮೂರು ಕಿಲೋಮೀಟರ್ ದೂರದವರೆಗೆ ಕಾಣಿಸಿಕೊಳ್ಳುತ್ತಿದೆ. ಈ ಮೂರು ಕಿಲೋಮೀಟರ್ ನದಿ ತಟದ ರೈತರು ಜಮೀನಿಗೆ ಬರಲು ಹೆದರುತ್ತಿದ್ದಾರೆ. ಜಮೀನಿಗೆ ನೀರು ಹಾಯಿಸಲು ಕರೆಂಟ್ ನೀಡುವುದೇ ಕಡಿಮೆ. ಅಂತದ್ದರಲ್ಲಿ ನದಿಗೆ ಇಳಿಯಲು ತಮಗೆ ಹೆದರಿಕೆಯಾಗುತ್ತಿದೆ ಎಂದು ರೈತರು ಜಮೀನುಗಳಿಗೆ ತೆರಳುತ್ತಿಲ್ಲವಂತೆ.
ಇನ್ನು, ದನಕರುಗಳ ಮೈತೊಳೆಯಲು ನೀರು ಕುಡಿಸಲು ಸಹ ರೈತರು ಭಯಪಡುತ್ತಿದ್ದಾರೆ. ಹೆಣ್ಮಕ್ಕಳು ಬಟ್ಟೆ ಸೆಳೆಯಲು ನದಿಗೆ ಬರುತ್ತಿಲ್ಲ. ಆರಂಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಹಿಡಿಯುವ ಕುರಿತಂತೆ ಸಾಕಷ್ಟು ಭರವಸೆ ನೀಡಿದ್ದರು. ದಾಂಡೇಲಿಯಿಂದ ನುರಿತ ತಜ್ಞರನ್ನು ಕರೆಸುವುದಾಗಿ ತಿಳಿಸಿದ್ದರು. ಆದರೆ ಮೊಸಳೆ ಕಾಣಿಸಿಕೊಂಡು ಹಲವು ದಿನಗಳಾದ್ರು ಯಾವ ತಜ್ಞರು ಬಂದಿಲ್ಲ ಎನ್ನುತ್ತಾರೆ' ತಾಲೂಕು ರೈತ ಸಂಘದ ಅಧ್ಯಕ್ಷ ಶಂಕರಗೌಡ ಶಿರಗಂಬಿ.
ನದಿಗೆ ಕಾಲಿಡದಂತೆ ಮೊಸಳೆ ಆತಂಕ ತಂದಿದೆ: 'ನದಿಯನ್ನ ಅವಲಂಬಿಸಿ ಜೀವನ ಸಾಗಿಸುತ್ತಿರುವ ನಮಗೆ ಜೀವನ ನಡೆಸುವುದೇ ಕಷ್ಟವಾಗಿದೆ. ಸಮೀಪದ ಕುಡಪಲಿ ಗ್ರಾಮ ಇದ್ದುದ್ದರಲ್ಲಿಯೇ ಹಲವು ಸೌಕರ್ಯ ಇರುವ ಗ್ರಾಮ. ಈ ಗ್ರಾಮಕ್ಕೆ ದಿನಸಿ ಸಾಮಾನು ತರಕಾರಿ ಮತ್ತು ಆಸ್ಪತ್ರೆಗೆ ತರಿಸಲು ಹಲವು ಗ್ರಾಮಸ್ಥರು ಈ ಕುಮದ್ವತಿ ನದಿ ದಾಟಿ ಹೋಗಬೇಕು. ಮೊಸಳೆ ಇಲ್ಲದ ವೇಳೆ ಹಗಲು ರಾತ್ರಿ ಎನ್ನದೇ ಓಡಾಡುತ್ತಿದ್ದ ಗ್ರಾಮಸ್ಥರು ಈಗ ಹಗಲಿನಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ನದಿಗೆ ಕಾಲಿಡದಂತೆ ಮೊಸಳೆ ಆತಂಕ ತಂದಿದೆ. ಇನ್ನು ಮೊಸಳೆ ಬಾಂದಾರದ ಸಮೀಪವೇ ಕಾಣಿಸಿಕೊಳ್ಳುತ್ತಿದೆ. ಬಾಂದಾರದ ಮೂಲಕ ಶಾಲಾ ಕಾಲೇಜ್‌ಗಳಿಗೆ ತೆರಳಲು ಸಹ ವಿದ್ಯಾರ್ಥಿಗಳು ಹೆದರುತ್ತಿದ್ದಾರೆ. ಮೊಸಳೆಯಿಂದ ಸಾಕಷ್ಟು ಆತಂಕಗೊಂಡಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಮೊಸಳೆಯನ್ನ ಬೇರೆ ಕಡೆ ಸ್ಥಳಾಂತರಿಸುವಂತೆ' ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ್ ನಾಗಣ್ಣನವರ್ ಅವರು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಸಹ ಮೊಸಳೆ ಕಾಣಿಸಿಕೊಂಡು ಸಾಕಷ್ಟು ಆತಂಕ ಮೂಡಿಸಿತ್ತು. ಅವಾಗ ಸಹ ಅಧಿಕಾರಿಗಳು ಮೊಸಳೆ ಇದೆ ಎಂದು ಬೋರ್ಡ್ ಹಾಕಿ ಎಚ್ಚರ ವಹಿಸುವಂತೆ ಸೂಚಿಸಿದ್ದು ಬಿಟ್ಟರೆ ಮುಂದುವರೆದಿರಲಿಲ್ಲ. ಇದೀಗ ಮತ್ತೆ ಮೊಸಳೆ ಕಾಣಿಸಿಕೊಂಡಿದ್ದು, ಅಧಿಕಾರಿಗಳು ಮತ್ತೆ ಅದೇ ಭರವಸೆ ನೀಡುತ್ತಿದ್ದಾರೆ. ದಿನಪೂರ್ತಿ ಸಮಸ್ಯೆ ಅನುಭವಿಸುವವರು ನಾವು. ನಮ್ಮಲ್ಲಿ ಆತಂಕ ಮನೆಮಾಡಿದ್ದು, ಅಧಿಕಾರಿಗಳು ಆದಷ್ಟು ಬೇಗ ಮೊಸಳೆಯನ್ನ ಬೇರೆ ಕಡೆ ಸ್ಥಳಾಂತರ ಮಾಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಓದಿ :ಭದ್ರಾ ನದಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆ.. ಪ್ರಾಣಾಪಾಯಕ್ಕೂ ಮುನ್ನ ಸೆರೆಹಿಡಿಯಿರಿ ಅಂತಿರುವ ಜನ