ಹಾವೇರಿ: ಜಿಲ್ಲೆಯ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಲಾರಿ ಕದ್ದು, ಅದೇ ಲಾರಿಯಲ್ಲಿ 87 ಲಕ್ಷ ರೂಪಾಯಿ ಮೌಲ್ಯದ ಗುಟ್ಕಾ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಮೈಸೂರು ಜಿಲ್ಲೆ ಭುಗತಗಲ್ಲಿಯಲ್ಲಿ ಹಾಲಿ ವಾಸವಾಗಿದ್ದ ರಾಜಸ್ಥಾನದ ಮೂಲದವರು. ಭಗವಾನ್ ರಾಮ್(23), ರತ್ನಾರಾಮ್ (23), ಧಾನಾರಾಮ್ (25) ಹಾಗೂ ಅರ್ಜುನ್ (27) ಬಂಧಿತರು ಎಂದು ಗುರುತಿಸಲಾಗಿದೆ.
87 ಲಕ್ಷ ರೂ. ಮೌಲ್ಯದ ಗುಟ್ಕಾ ಬಾಕ್ಸ್ ಕಳ್ಳತನ:ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಎರಡರಿಂದ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕೇಸ್ ಕುರಿತು ಮಾತನಾಡಿದ ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ಅವರು, ''ಆರೋಪಿಗಳು ತಮ್ಮ ಸುಳಿವು ಸಿಗದಂತೆ ತೀವ್ರ ಎಚ್ಚರಿಕೆ ವಹಿಸಿದ್ದರು. ಆರೋಪಿತರು ಜೂನ್ 9ರಂದು ಬ್ಯಾಡಗಿ ಎಪಿಎಂಸಿಯಲ್ಲಿ ಲಾರಿ ಕಳ್ಳತನ ಮಾಡಿದ್ದರು. ನಂತರ ಅದೇ ದಿನ ರಾತ್ರಿ ರಾಣೆಬೆನ್ನೂರು ಶಹರದ ಗೋದಾಮಿನಲ್ಲಿ ಸುಮಾರು 87 ಲಕ್ಷ ರೂಪಾಯಿ ಮೌಲ್ಯದ ಗುಟ್ಕಾ ಬಾಕ್ಸ್‌ಗಳನ್ನು ಕಳ್ಳತನ ಮಾಡಿದ್ದರು.
ಕಳ್ಳತನಕ್ಕೆ ಯಾವುದೇ ಮೊಬೈಲ್ ಸೇರಿದಂತೆ ಇತರೆ ಸುಳಿವುಗಳನ್ನು ನೀಡದೇ ಆರೋಪಿಗಳು ಈ ಕೃತ್ಯ ಎಸಗಿದ್ದರು. ಅಷ್ಟೇ ಅಲ್ಲದೇ ವಾಹನಗಳ ನಂಬರ್ ಪ್ಲೇಟ್ ಅನ್ನು ಬದಲಿಸಿ ವಾಹನ ಚಲಾಯಿಸಿದ್ದರು. ಕಳ್ಳತನ ಮಾಡಿದ್ದ ಗುಟ್ಕಾಗಳನ್ನು ಚೆನ್ನೈಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಮುಂದಾಗಿದ್ದರು. ಅಲ್ಲದೇ ಅದರಲ್ಲಿ 27 ಲಕ್ಷ ರೂಪಾಯಿ ಮೌಲ್ಯದ ಗುಟ್ಕಾ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.