ಹಾವೇರಿ:ಕೊರೊನಾ ಪಾಸಿಟಿವ್ ಬಂದ ವ್ಯಕ್ತಿವೋರ್ವ ಕಬ್ಬಿನ ಗದ್ದೆಯಲ್ಲಿ ಓಡಿ ಹೋಗಿರುವ ಘಟನೆ ತಾಲೂಕಿನ ಕಬ್ಬೂರು ತಾಂಡಾದಲ್ಲಿ ನಡೆದಿದೆ.
35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ಗಂಟಲು ಮತ್ತು ಮೂಗಿನ ದ್ರವವನ್ನ ಬುಧವಾರ ಪರೀಕ್ಷೆ ಮಾಡಲಾಗಿತ್ತು. ವರದಿ ಪಾಸಿಟಿವ್ ಬರುತ್ತಿದ್ದಂತೆ ಆ್ಯಂಬುಲೆನ್ಸ್ ಸಿಬ್ಬಂದಿ ಆ ವ್ಯಕ್ತಿಯನ್ನ ಕರೆತರಲು ಇಂದು ತಾಂಡಾಕ್ಕೆ ಹೋಗಿದ್ದರು. ಆ್ಯಂಬುಲೆನ್ಸ್ ಬರುತ್ತಿದ್ದಂತೆ ಮನೆಯಿಂದ ತಪ್ಪಿಸಿಕೊಂಡ ಸೋಂಕಿತ ಸಮೀಪದಲ್ಲಿರುವ ಕಬ್ಬಿನ ಗದ್ದೆಯೊಳಗೆ ಮಾಯವಾಗಿದ್ದಾನೆ.
ಕೊರೊನಾ ಪಾಸಿಟಿವ್ ಅನ್ನೋದನ್ನು ತಿಳಿದು ವ್ಯಕ್ತಿ ಪರಾರಿ.. ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ತಲೆಬಿಸಿ ಆ್ಯಂಬುಲೆನ್ಸ್ ಸಿಬ್ಬಂದಿ ತೌಪಿಕ್ ಪಠಾಣ್ ಮತ್ತು ಶಂಕರ ಲಮಾಣಿ, ಗ್ರಾಮಸ್ಥರು ಸೋಂಕಿತನ ಪತ್ತೆಗಾಗಿ ಕಬ್ಬಿನ ಗದ್ದೆಯಲ್ಲಿ ಹುಡುಕಾಟ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಗ್ರಾಮಾಂತರ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಸಹ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಹಾವೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಸೋಂಕಿತ ವ್ಯಕ್ತಿ ತಪ್ಪಿಸಿಕೊಂಡಿರುವುದು ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ.