ಹಾವೇರಿ: ಜಿಲ್ಲಾಸ್ಪತ್ರೆ ಮುಂದಿರುವ ಜಿಲ್ಲಾಮಟ್ಟದ ಹೂ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಸುಮಾರು 25ಕ್ಕೂ ಅಧಿಕ ಅಂಗಡಿಗಳು ಬಂದ್ ಆಗಿವೆ. ದಿನನಿತ್ಯ ಪುಷ್ಪಗಳಿಂದ ಕಂಗೊಳಿಸುತ್ತಿದ್ದ ಮಾರುಕಟ್ಟೆ ಈಗ ಖಾಲಿ ಖಾಲಿಯಾಗಿದೆ.
ಕೋವಿಡ್ ನಿಯಂತ್ರಣಕ್ಕೆ ಜನತಾ ಕರ್ಫ್ಯೂ ಜಾರಿಯಾದ ಬಳಿಕ ಲಾಕ್ಡೌನ್ ಜಾರಿಗೊಳಿಸಲಾಯಿತು. ಇದೀಗ ಮತ್ತೆ ಲಾಕ್ಡೌನ್ ವಿಸ್ತರಣೆಗೊಂಡಿದೆ. ಮೊದಲೇ ತತ್ತರಿಸಿ ಹೋಗಿದ್ದ ಹೂ ಬೆಳೆಗಾರರು ಮತ್ತು ವ್ಯಾಪಾರಿಗಳಿಗೀಗ ಗಾಯದ ಮೇಲೆ ಬರೆ ಎಳೆದ ಪರಿಸ್ಥಿತಿ ಇದೆ.
ಪುಷ್ಪಗಳಿಗೆ ಬೇಡಿಕೆ ತರುತ್ತಿದ್ದ ಮದುವೆ, ಸಮಾರಂಭಗಳು ಕೋವಿಡ್ ನಿಯಮಾವಳಿಗಳ ಮೂಲಕ ಅತೀ ಸರಳವಾಗಿ ನಡೆಯುತ್ತಿದೆ. ಹೆಚ್ಚಿನ ಕಡೆಗಳಲ್ಲಿ ಮದುವೆಗಳನ್ನು ಮುಂದೂಡಲಾಗಿದೆ. ಮದುವೆ, ರಾಜಕೀಯ ಸಮಾರಂಭಗಳಿಗೆ ತಯಾರಿ ಮಾಡುತ್ತಿದ್ದ ಹೂ ಮಾಲೆಗಳ ಕೆಲಸ ನಿಂತಿದೆ. ಇತ್ತ ಮಾರುಕಟ್ಟೆ ಇಲ್ಲದೇ ಕಂಗೆಟ್ಟ ರೈತರು ತಮ್ಮ ಜಮೀನುಗಳಲ್ಲಿ ಬೆಳೆದು ನಿಂತಿರುವ ಹೂಗಳನ್ನು ಸ್ವತಃ ತಾವೇ ನಾಶ ಮಾಡುತ್ತಿದ್ದಾರೆ. ವ್ಯಾಪಾರಸ್ಥರು ಸಹ ದುಡಿಯೆಯಿಲ್ಲದ ಪರಿಣಾಮ ಕೈಯಲ್ಲಿ ಕಾಸಿಲ್ಲದೆ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.