ಹಾವೇರಿ:ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಮೂರಂಕಿ ಇದ್ದ ಸೋಂಕಿತರ ಸಂಖ್ಯೆ ಇದೀಗ ಎರಡಂಕಿಗೆ ಇಳಿದಿದೆ. ಪಾಸಿಟಿವಿಟಿ ದರ ಶೇ. 2ಕ್ಕೆ ಕುಸಿದಿದೆ.
ಆದರೆ, ಮರಣ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ. ಜಿಲ್ಲೆಯಲ್ಲಿ ಇನ್ನೂ ಕೋವಿಡ್ ಸೋಂಕಿತರ ಮರಣ ಪ್ರಮಾಣ ಶೇ. 3ರಷ್ಟಿದೆ. ಇದು ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ವೈದ್ಯರ ತಂಡ ಶ್ರಮಿಸುತ್ತಿದೆ. ಆದರೆ, ರೋಗಿಗಳ ನಿರ್ಲಕ್ಷ್ಯ ಮತ್ತು ಭಯವೇ ಹೆಚ್ಚಿನ ಸಾವು ಸಂಭವಿಸಲು ಕಾರಣ ಎಂದು ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪರಮೇಶ ಹಾವನೂರು ಹೇಳಿದ್ದಾರೆ.
ಕೊರೊನಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಜಿಲ್ಲಾಸ್ಪತ್ರೆ ಅಥವಾ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ತೋರಿಸಬೇಕು. ಆದರೆ, ಜನ ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಾರೆ. ಉಸಿರಾಟದ ಸಮಸ್ಯೆ ಅಧಿಕವಾಗಿ ಆಮ್ಲಜನಕದ ಕೊರತೆ ಕಾಣಿಸಿಕೊಳ್ಳುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಬರುತ್ತಾರೆ, ಅಷ್ಟರಲ್ಲಿ ಪರಿಸ್ಥಿತಿ ಕೈಮೀರಿರುತ್ತದೆ. ಸಕ್ಕರೆ ಖಾಯಿಲೆ ಅಧಿಕ ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ ಇರುವವರು ಅಧಿಕ ಸಂಖ್ಯೆಯಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ.
ಈ ರೀತಿಯ ಖಾಯಿಲೆ ಇರುವವರು ಕೊರೊನಾ ಹರಡುವ ಪ್ರದೇಶಗಳಿಂದ ದೂರ ಇರುವುದು ಒಳಿತು. 60 ವರ್ಷ ಮೇಲ್ಪಟ್ಟವರ ಮರಣ ಸಂಖ್ಯೆ ಸಹ ಅಧಿಕವಾಗಿದೆ. ಈ ವಯಸ್ಸಿನವರು ಕೊರೊನಾ ಹರಡುವ ಪ್ರದೇಶಗಳಿಂದ ದೂರವಿರಬೇಕು ಮತ್ತು ಮನೆಯಲ್ಲಿ ಆದಷ್ಟು ಪ್ರತ್ಯೇಕವಾಗಿದ್ದರೆ ಉತ್ತಮ ಎಂದು ವೈದ್ಯರು ಹೇಳಿದ್ದಾರೆ.