ಹಾವೇರಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಹಾವೇರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಅಪರಾಧ ಸಾಬೀತಾದ ಹಿನ್ನೆಲೆ ಅಣ್ಣಪ್ಪ ಕಬ್ಬೂರು ಎಂಬಾತನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ 80 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಆರೋಪಿ ಅಣ್ಣಪ್ಪ ಕಬ್ಬೂರು 2019ರ ಸೆ.27ರಂದು ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಗ್ರಾಮವೊಂದರ ಕಾಫಿ ಎಸ್ಟೇಟ್ನಲ್ಲಿನ ಮನೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೇ, ನೊಂದ ಬಾಲಕಿಗೆ ಶಿವಮೊಗ್ಗದ ದೇವಸ್ಥಾನವೊಂದದಲ್ಲಿ ತಾಳಿ ಕಟ್ಟಿ ಮದುವೆಯಾಗಿದ್ದ. ಈ ಬಗ್ಗೆ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಿರೇಕೆರೂರು ವೃತ್ತದ ತನಿಖಾಧಿಕಾರಿ ಸಿಪಿಐ ಮಂಜುನಾಥ್ ಪಂಡಿತ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪಿ ಮೇಲೆ ಕಲಂ 363, 354(ಡಿ), 343, 376(2)(ಎನ್) ಭಾ.ದಂ.ಸಂ ಮತ್ತು ಕಲಂ: 4, 6, 12 ಪೋಕ್ಸೋ ಕಾಯ್ದೆ-2012 ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಅಡಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ವಾದ- ಪ್ರತಿವಾದ ಆಲಿಸಿದ ಹಾವೇರಿ ವಿಶೇಷ ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ನಿಂಗೌಡ ಪಾಟೀಲ್ ಅವರು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷ 80 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ದಂಡದ ಹಣದಲ್ಲಿ ನೊಂದ ಬಾಲಕಿಗೆ 1 ಲಕ್ಷ ರೂ. ನೀಡಬೇಕು ಎಂದು ತಿಳಿಸಿದ್ದಾರೆ. ಜೊತೆಗೆ, ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಸರ್ಕಾರವು ನೊಂದ ಬಾಲಕಿಗೆ 4 ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ ಶಂಕರಗೌಡ ಪಾಟೀಲ್ ವಾದ ಮಂಡಿಸಿದ್ದರು.