ಕರ್ನಾಟಕ

karnataka

ETV Bharat / state

ವ್ಯಾಪಾರವಿಲ್ಲದೆ ಭಣಗುಡುತ್ತಿದೆ ಹಾವೇರಿ ಹತ್ತಿ ಮಾರುಕಟ್ಟೆ - ಜಯಧರ ಹತ್ತಿ

ಹಾವೇರಿ ಹತ್ತಿ ಮಾರುಕಟ್ಟೆ ಇದೀಗ ಭಣಗುಡಲಾರಂಭಿಸಿದೆ. ಬಹುತೇಕ ಹತ್ತಿ ಖರೀದಿ ಅಂಗಡಿಗಳು ಬೀಗ ಹಾಕಿವೆ.

ಹಾವೇರಿ
ಹಾವೇರಿ

By ETV Bharat Karnataka Team

Published : Dec 7, 2023, 11:01 PM IST

Updated : Dec 8, 2023, 8:10 PM IST

ಹತ್ತಿ ಖರೀದಿದಾರ ಚನ್ನಬಸಪ್ಪ

ಹಾವೇರಿ:ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಈ ಮಾರುಕಟ್ಟೆಗೆ ವರ್ಷದ ಆರು ತಿಂಗಳು ರೈತರು ಜಯಧರ ಮತ್ತು ಬಿಟಿ ಹತ್ತಿ ಮಾರಾಟ ಮಾಡಲು ಬರುತ್ತಿದ್ದರು. ಆರು ತಿಂಗಳು ಹತ್ತಿ ಖರೀದಿ ಮಾಡಿದ ದಲಾಲರು, ಉಳಿದ ದಿನಗಳಲ್ಲಿ ಜಿನ್ನಿಂಗ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದರು.

ಕೂಲಿಕಾರ್ಮಿಕರಿಗೆ, ಕೂಲಿ ದಲಾಲರಿಗೆ ಕಮಿಷನ್, ಖರೀದಿದಾರರಿಗೆ ತಮಗೆ ಬೇಕಾದ ಹತ್ತಿ ಮಾರುಕಟ್ಟೆಯಲ್ಲಿ ಸಿಗುತ್ತಿತ್ತು. ಬೆಳಗಾವಿ ಜಿಲ್ಲೆ ಗೋಕಾಕ್​ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ನೂರಾರು ಖರೀದಿದಾರರು ಖರೀದಿಗಾಗಿ ಹಾವೇರಿ ಮಾರುಕಟ್ಟೆಗೆ ಬರುತ್ತಿದ್ದರು. ಸೀಜನ್​ನಲ್ಲಿ ದಿನಕ್ಕೆ 25 ಸಾವಿರ ಹತ್ತಿ ಅಂಡಿಗೆಗಳ ಆವಕ ಆಗುತ್ತಿತ್ತು. ನಂತರ ಈ ಪ್ರಮಾಣ ಸೋಮವಾರ ಮತ್ತು ಗುರುವಾರ ಮಾತ್ರ ಎನ್ನುವ ಹಂತಕ್ಕೆ ಬಂತು. ಕ್ರಮೇಣ ಆವಕದಲ್ಲಿ ಇಳಿಮುಖ ಕಂಡು ಪ್ರಸ್ತುತ ಸೋಮವಾರ ಮತ್ತು ಗುರುವಾರದ ದಿನ 200 ಅಂಡಿಗೆಗಳು ಆವಕವಾಗುತ್ತಿದೆ. ಪ್ರಸ್ತುತ ಹತ್ತಿ ಸೀಜನ್ ಇದ್ದರೂ ಸಹ ಹತ್ತಿ ಅಂಡಿಗೆಗಳ ಆವಕ ಕಡಿಮೆಯಾಗಿದೆ.

ಸೀಜನ್‌ನಲ್ಲಿ ಹತ್ತಿ ಅಂಡಿಗೆ ತುಂಬಿರುತ್ತಿದ್ದ ಹಾವೇರಿ ಹತ್ತಿ ಮಾರುಕಟ್ಟೆ ಇದೀಗ ಭಣಗುಡಲಾರಂಭಿಸಿದೆ. ಬಹುತೇಕ ಹತ್ತಿ ಖರೀದಿ ಅಂಗಡಿಗಳು ಈಗ ಬೀಗ ಹಾಕಿವೆ. ಅಂಗಡಿ ತುಂಬಿರಬೇಕಾದ ಕಣಗಳು ಖಾಲಿ ಖಾಲಿ. ಸದಾ ಕೂಲಿಕಾರ್ಮಿಕರ ಶ್ರಮ, ವಾಹನಗಳ ಓಡಾಟದ ಅಬ್ಬರ ಕಂಡಿದ್ದ ಮಾರುಕಟ್ಟೆಯಲ್ಲಿ ಇದೀಗ ಬೆರಳೆಣಿಕೆಯಷ್ಟು ದಲಾಲರ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಕೂನರು ಕೆಲಸ ಕಳೆದುಕೊಂಡಿದ್ದು, ಬೇರೆಯವರ ಹತ್ತಿರ ದುಡಿಯಲು ಹೋಗುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಹಾನಿಗೊಳಗಾದ ದಲಾಲರು ಅಂಗಡಿ ತೊರೆದು ಬೇರೆ ಕೆಲಸದತ್ತ ಮುಖಮಾಡಿದ್ದಾರೆ. ಹತ್ತಿ ಮಾರುಕಟ್ಟೆಯನ್ನು ಅವಲಂಬಿಸಿದ ಹಲವು ಕಸುಬುಗಳು ಇದೀಗ ಮಾಯವಾಗಿವೆ. ಅಲ್ಲೊಂದು ಇಲ್ಲೊಂದು ಅಂಗಡಿಗಳಲ್ಲಿ ಹತ್ತಿ ಅಂಡಿಗೆಗಳು ಮಾರಾಟಕ್ಕೆ ಬರುತ್ತಿವೆ. ಅವುಗಳನ್ನು ಮಾರುವ ದಾವಂತ ವರ್ತಕರಿಗೆ ಇಲ್ಲದಂತಾಗಿದೆ. ಖರೀದಿದಾರರ ಸಂಖ್ಯೆ ಕಡಿಮೆಯಾಗಿದೆ. ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಜಿನ್ನಿಂಗ ಮಾಡಿಸುವವರಿಲ್ಲ. ಇದಕ್ಕೆಲ್ಲಾ ಹಲವು ಕಾರಣಗಳಿವೆ ಎನ್ನುತ್ತಾರೆ ಇಲ್ಲಿಯ ವರ್ತಕರು.

2000ರಿಂದ 2010 ರವರೆಗೆ ಹಾವೇರಿ ಹತ್ತಿ ಮಾರುಕಟ್ಟೆ ರಾಜ್ಯದಲ್ಲಿ ಅತಿಹೆಚ್ಚು ಹತ್ತಿ ಮಾರಾಟವಾಗುವ ಮಾರುಕಟ್ಟೆಯಾಗಿತ್ತು. ಆದರೆ ಸರ್ಕಾರ ಎಪಿಎಂಸಿಯಲ್ಲಿ ಮಾರಾಟ ಮಾಡಲು ಸೆಸ್ ಹಾಕಿ ಎಪಿಎಂಸಿಯಿಂದ ಹೊರಗೆ ಮಾರಾಟಕ್ಕೆ ಸೆಸ್ ಇಲ್ಲದಂತೆ ಮಾಡಿತು. ಇನ್ನು ಹಾವೇರಿಯಲ್ಲಿ ಆರಂಭವಾದ ಹತ್ತಿ ಫ್ಯಾಕ್ಟರಿಗಳು ರೈತರ ಜೊತೆ ಸಾಪಿ ವ್ಯಾಪಾರ ನಡೆಸಿ ನೇರವಾಗಿ ರೈತರಿಂದ ಹತ್ತಿ ಖರೀದಿ ಮಾಡಲಾರಂಭಿಸಿದವು. ಇದು ಸಹ ಹತ್ತಿ ಮಾರುಕಟ್ಟೆಗೆ ಆವಕ ಕಡಿಮೆ ಮಾಡಿತು.

ಹತ್ತಿ ಬೆಳೆಯುವಿಕೆ ಕಡಿಮೆ: ಏಷ್ಯಾ ಖಂಡದಲ್ಲಿ ಅತಿಹೆಚ್ಚು ಹತ್ತಿ ಬೆಳೆಯುತ್ತಿದ್ದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹಾವೇರಿ ಜಿಲ್ಲೆಯ ರೈತರು ಹತ್ತಿ ಬೆಳೆಯುವ ಪ್ರಮಾಣ ಕಡಿಮೆ ಮಾಡಿದರು. ಕ್ರಮೇಣ ಜಯಧರ ಹತ್ತಿ ಬೆಳೆಯುವುದನ್ನೇ ಬಿಟ್ಟರು. ಇನ್ನು ಅಧಿಕ ಮಳೆ ಮತ್ತು ಬರಗಾಲ ರೈತರನ್ನ ಹತ್ತಿ ಬೆಳೆಯಿಂದ ಗೋವಿನಜೋಳದ ಕಡೆ ಮುಖಮಾಡುವಂತೆ ಮಾಡಿತು. ಹತ್ತಿ ಇಳುವರಿ ಕುಂಠಿತವಾಗಿದ್ದು, ಹತ್ತಿ ಬಿತ್ತನೆ ಬೀಜಕ್ಕಾಗಿ ರೈತರ ಪ್ರತಿಭಟನೆ ಕಳಪೆ ಬಿತ್ತನೆ ಬೀಜಗಳ ಹಾವಳಿಯಿಂದ ತತ್ತರಿಸಿಹೋದ ಹಾವೇರಿ ಜಿಲ್ಲೆಯ ಹತ್ತಿ ಬೆಳೆಗಾರರು, ಹತ್ತಿ ಬೆಳೆಯುವ ಪ್ರಮಾಣ ಕಡಿಮೆ ಮಾಡಿದರು. ಅಧಿಕ ಪ್ರಮಾಣದ ಕೀಟನಾಶಕ, ಕೂಲಿಕಾರ್ಮಿಕರ ಅಲಭ್ಯತೆ ಸಹ ಹತ್ತಿ ಬೆಳೆಯುವಿಕೆ ಕಡಿಮೆ ಮಾಡಿತು.

ಇದಲ್ಲದೆ ಇನ್ನು ಹಲವು ಕಾರಣಗಳಿಂದ ಹತ್ತಿ ಬೆಳೆಯ ವಿಸ್ತೀರ್ಣ ಪ್ರಮಾಣ ಕಡಿಮೆಯಾಯಿತು. ಕೆಲ ದಲಾಲರು ಮನೆ ಮನೆಗೆ ಹೋಗಿ ಹತ್ತಿ ಖರೀದಿ ಮಾಡಲಾರಂಭಿಸಿದರು. ಸರ್ಕಾರಗಳ ಹಲವು ನೀತಿಗಳಿಂದು ಸಹ ತಮ್ಮ ಮೇಲೆ ಪರಿಣಾಮವಾಗಿದೆ ಎನ್ನುತ್ತಾರೆ ಹತ್ತಿ ವರ್ತಕರು.

ಮಾರುಕಟ್ಟೆಗೆ ಹೊಡೆತ:ಬೇರೆ ದೇಶಗಳಿಂದ ಆಮದು ಮಾಡಿಕೊಂಡಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ಹತ್ತಿ ಮತ್ತು ಕಾಳುಕಡ್ಡಿ ಮಾರುಕಟ್ಟೆಗಳನ್ನು ಬೇರ್ಪಡಿಸಿದ್ದು ಸಹ ಹತ್ತಿ ಮಾರುಕಟ್ಟೆಗೆ ಹೊಡೆತ ಬಿತ್ತು ಎನ್ನುತ್ತಾರೆ ವರ್ತಕರು. ಕಾಳುಕಡಿ ಮತ್ತು ಹತ್ತಿ ಮಾರುಕಟ್ಟೆ ಒಂದೆ ಕಡೆ ಇದ್ದರೆ ಎರಡು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು. ಕೇವಲ ಹತ್ತಿಯನ್ನೇ ನಂಬಿದ್ದ ತಮಗೆ ತಾವು ಇದೀಗ ಸಾಕಷ್ಟು ಕುಗ್ಗಿದ್ದೇವೆ. ಸರ್ಕಾರ ಈ ಕೂಡಲೇ ನಮ್ಮ ನೆರವಿಗೆ ಬರಬೇಕು. ಆದಷ್ಟು ಬೇಗನೆ ಹತ್ತಿ ಮಾರುಕಟ್ಟೆ ಮತ್ತು ಕಾಳುಕಡಿ ಮಾರುಕಟ್ಟೆ ಒಂದುಗೂಡಿಸಬೇಕು ಎಂದು ವರ್ತಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಹತ್ತಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಅನ್ಯಾಯ ಆರೋಪ.. ಡಿಸಿ ದಿಢೀರ್​ ಭೇಟಿ ನೀಡಿ ಪರಿಶೀಲನೆ

Last Updated : Dec 8, 2023, 8:10 PM IST

ABOUT THE AUTHOR

...view details