ಹಾವೇರಿ : ಜಿಲ್ಲೆಯಲ್ಲಿ ಶನಿವಾರ ಮೂವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಮೂವರು ಹಾವೇರಿ ತಾಲೂಕಿನವರಾಗಿದ್ದು, ಜಿಲ್ಲೆಯಲ್ಲಿ ಮೂರು ತಾಲೂಕುಗಳಿಗೆ ಕಾಲಿಟ್ಟಿದ್ದ ಕೊರೊನಾ ಇದೀಗ ಹಾವೇರಿ ತಾಲೂಕಿಗೂ ಕಾಲಿಟ್ಟಂತಾಗಿದೆ.
ಹಾವೇರಿಯ ಗಣಜೂರು, ಸಂಗೂರು ಮತ್ತು ಗುತ್ತಲ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ತಾಕಿದೆ. ಗಣಜೂರಿನ ಐವತ್ತು ವರ್ಷದ ಮಹಿಳೆ ಮಗನ ಮರಣ ಪ್ರಮಾಣಪತ್ರ ತರಲು ಮುಂಬೈಗೆ ಹೋಗಿ ಅಲ್ಲಿಯೇ ಲಾಕ್ಡೌನ್ ಆಗಿದ್ದರು. ಲಾಕ್ಡೌನ್ ಸಡಿಲಿಕೆ ನಂತರ ಲಾರಿ ಮೂಲಕ ಗಣಜೂರಿಗೆ ತೆರಳುತ್ತಿದ್ದ ಮಹಿಳೆಯನ್ನ ವಿಚಾರಿಸಿ ಕ್ವಾರಂಟೈನ್ ಹಾಕಲಾಗಿತ್ತು. ಜೂನ್ ಒಂದರಂದು ಮಹಿಳೆ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಅವರಿಗೆ ಕೊರೊನಾ ಇರುವುದು ಶನಿವಾರ ದೃಢಪಟ್ಟಿದ್ದು, ಮಹಿಳೆಗೆ ಪಿ-5002 ಸಂಖ್ಯೆ ನೀಡಲಾಗಿದೆ.
ಹಾವೇರಿಯಲ್ಲಿಂದು ಮೂವರಿಗೆ ಕೊರೊನಾ : ಇಲ್ಲಿದೆ ಟ್ರಾವೆಲ್ ಹಿಸ್ಟರಿ ಹಾವೇರಿ ತಾಲೂಕಿನ ಸಂಗೂರು ಗ್ರಾಮದ 45 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಈತ ಮಹಾರಾಷ್ಟ್ರದ ಅರ್ಧಾಪೂರ ನಾಂದೇಡ್ ಜಿಲ್ಲೆಯ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು. ಕಾರ್ಖಾನೆಯಲ್ಲಿ ಟೆಕ್ನಿಕಲ್ ಮೇಲ್ವಿಚಾರಕ ಆಗಿದ್ದ ಸೋಂಕಿತ ಮೇ 27 ರಂದು ಜಿಲ್ಲೆಗೆ ಆಗಮಿಸಿದ್ದ. ಈತನನ್ನು ಸಹ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದ್ದು, ಜೂನ್ 1 ರಂದು ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಈತನಿಗೆ ಕೊರೊನಾ ಇರುವುದು ಶನಿವಾರ ದೃಢಪಟ್ಟಿದ್ದು, ಪಿ-5003 ರೋಗಿ ಸಂಖ್ಯೆ ನೀಡಲಾಗಿದೆ.
ಗುತ್ತಲದ ಪಟ್ಟಣದ 27 ವರ್ಷದ ಮಹಿಳೆಯಲ್ಲಿ ಕೊರೊನಾ ಪತ್ತೆಯಾಗಿದೆ. ಈಕೆ ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಕೆಎಸ್ಆರ್ಟಿಸಿ ಡಿಪೋದಲ್ಲಿ ಮೆಕ್ಯಾನಿಕಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೇ 5 ರಂದು ಪತಿಯ ಬೈಕ್‌ನಲ್ಲಿ ಮಂಡ್ಯದ ಮಳವಳ್ಳಿಯಿಂದ ಗುತ್ತಲಕ್ಕೆ ಆಗಮಿಸಿದ್ದರು. ಜೂನ್ 1 ರಂದು ಮರಳಿ ಕೆಲಸಕ್ಕೆ ಹಾಜರಾಗಲು ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟಿದ್ದಾಳೆ. ಈ ಸಂದರ್ಭದಲ್ಲಿ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳಿಸಲಾಗಿದ್ದು, ಶನಿವಾರ ಅವಳ ಫಲಿತಾಂಶ ಬಂದಿದ್ದು, ಅವಳಿಗೂ ಸಹ ಕೊರೊನಾ ದೃಢಪಟ್ಟಿದೆ. ಮಹಿಳೆಗೆ ರೋಗಿ ಸಂಖ್ಯೆ ಪಿ 5004 ಸಂಖ್ಯೆ ನೀಡಲಾಗಿದೆ.
ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 22 ಕ್ಕೇರಿದಂತಾಗಿದ್ದು ಆರು ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ 19 ಜನ ಸಕ್ರೀಯ ಕೊರೊನಾ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.