ರಾಣೇಬೆನ್ನೂರು(ಹಾವೇರಿ): ಕೊರೊನಾ ವೈರಸ್ ಬಹುಬೇಗ ಪತ್ತೆ ಹಚ್ಚಲು ಸರ್ಕಾರ ಇತ್ತೀಚೆಗೆ ರ‍್ಯಾಪಿಡ್ ಕಿಟ್ ಒದಗಿಸಿದೆ. ಆದರೆ, ರಾಣೇಬೆನ್ನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಿಟ್ ಇದ್ದರೂ ಸಹ ಕೊರೊನಾ ವರದಿ ನೀಡುವುದು ಎರಡು ದಿನವಾಗುತ್ತಿದೆ.
ರ‍್ಯಾಪಿಡ್ ಕಿಟ್ ಇದ್ದರೂ ಕೊರೊನಾ ಪರೀಕ್ಷೆ ಫಲಿತಾಂಶ ತಡ: ಸಾರ್ವಜನಿಕರಲ್ಲಿ ಆತಂಕ
ರಾಣೇಬೆನ್ನೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರ‍್ಯಾಪಿಡ್ ಆಂಟಿಜೆನ್ ಕಿಟ್ ಇದ್ದರೂ ಕೂಡ ಕೊರೊನಾ ವರದಿ ವಿಳಂಬವಾಗುತ್ತಿದೆ.
ರಾಣೇಬೆನ್ನೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರ‍್ಯಾಪಿಡ್ ಆಂಟಿಜೆನ್ ಕಿಟ್ ಇದ್ದರೂ ಕೂಡ ಕೊರೊನಾ ವರದಿ ತಡವಾಗಿ ನೀಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಈ ಕಿಟ್ನಿಂದ ಕೇವಲ ಒಂದು ಗಂಟೆಯಲ್ಲಿ ಕೊರೊನಾ ವೈರಸ್ ದೃಢಪಡಿಸಲಾಗುತ್ತದೆ. ಆದರೆ, ಇತ್ತೀಚೆಗೆ ಕಿಟ್ ಮೂಲಕ ಕೊರೊನಾ ವೈರಸ್ ಪತ್ತೆಹಚ್ಚಲು ಎರಡು ದಿನವಾಗುತ್ತಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿಗಳು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ತಾಲೂಕು ಆರೋಗ್ಯ ಅಧಿಕಾರಿಗಳು, ಕಿಟ್ ಇಂದ ಕೊರೊನಾ ವರದಿ ಅರ್ಧ ಗಂಟೆಯಲ್ಲಿ ಬರುತ್ತದೆ ಎನ್ನುತ್ತಿದ್ದಾರೆ.
ತಪಾಸಣೆ ಬಂದವರಿಗೆ ಅವರ ಮಾದರಿ ಪಡೆದು, ನಿಮ್ಮ ಮೊಬೈಲ್ ಸಂಖ್ಯೆಗೆ ಮಾಹಿತಿ ಕಳುಹಿಸಲಾಗುತ್ತದೆ ಎಂದು ಹೇಳಿ ಅವರನ್ನು ಆರೋಗ್ಯ ಸಿಬ್ಬಂದಿ ಮನೆಗೆ ಕಳುಹಿಸುತ್ತಾರೆ. ಎರಡು ದಿನದ ಬಳಿಕ ಫಲಿತಾಂಶ ಕಳುಹಿಸುತ್ತಾರೆ. ಈ ನಡುವೆ ಕೊರೊನಾ ತಪಾಸಣೆ ಮಾಡಿಸಿಕೊಂಡು ಬಂದ ವ್ಯಕ್ತಿಗಳು ಊರೆಲ್ಲಾ ಓಡಾಡಿದ ಎರಡು ದಿನ ನಂತರ, ನಿಮಗೆ ಕೊರೊನಾ ಸೋಂಕು ತಗುಲಿದೆ ಎಂದು ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಕೊರೊನಾ ಸಮುದಾಯಕ್ಕೆ ಹರಡುತ್ತಿದೆ ಎಂದು ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.